ತಾಳಿಕೋಟೆಯಲ್ಲಿ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟ

State level volleyball tournament at Talikot
ತಾಳಿಕೋಟೆ ನಗರದಲ್ಲಿ ನಡೆಯಲಿರುವ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟ ಕುರಿತ ಸುದ್ದಿಗೋಷ್ಠಿಯಲ್ಲಿ ಎಸ್.ಎಸ್.ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಪಾಟೀಲ ಮಾತನಾಡಿದರು. ಆರ್.ಎಲ್.ಕೊಪ್ಪದ, ಎಸ್.ಎಂ.ಸಜ್ಜನ, ಶ್ರೀಕಾಂತ ಪತ್ತಾರ, ಸಚೀನ ಪಾಟೀಲ ಇತರರಿದ್ದರು.
Published on

ತಾಳಿಕೋಟೆ: ನಗರದಲ್ಲಿ 2024-25ನೇ ಸಾಲಿನ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟ ನವೆಂಬರ್ 3 ರಿಂದ 5 ರವರೆಗೆ ಎಚ್.ಎಸ್.ಪಾಟೀಲ (ಸ್ವತಂತ್ರ) ಪಿಯು ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿವೆ ಎಂದು ಸಂಗಮಾರ್ಯ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಪಾಟೀಲ ಹೇಳಿದರು.

ಪಟ್ಟಣದ ಎಸ್.ಎಸ್.ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಲಾ ಶಿಕ್ಷಣ ಇಲಾಖೆ (ಪಪೂ) ಬೆಂಗಳೂರು, ವಿಜಯಪುರ ಹಾಗೂ ಸಂಗಮಾರ್ಯ ವಿದ್ಯಾಸಂಸ್ಥೆಯ ಎಚ್.ಎಸ್.ಪಾಟೀಲ (ಸ್ವತಂತ್ರ) ಪಿಯು ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ರಾಜ್ಯದ 32 ಜಿಲ್ಲೆಗಳಿಂದ ಒಟ್ಟು 900 ಕ್ರೀಡಾಪಟುಗಳು ಆಗಮಿಸಲಿದ್ದಾರೆ ಎಂದರು. ಎಲ್ಲ ಕ್ರೀಡಾಪಟುಗಳಿಗೆ ವಸತಿ, ಊಟದ ವ್ಯವಸ್ಥೆ, ಪಾರಿತೋಷಕಗಳ ವಿತರಣೆಗೆ ಎಲ್ಲ ತಯಾರಿ ಹಾಗೂ ಕ್ರೀಡಾಂಗಣದ ಸಿದ್ಧತೆ ಕೂಡ ಮಾಡಿಕೊಳ್ಳಲಾಗುತ್ತಿದೆ ಎಂದರು.

ನ.3 ರಂದು ಮಧ್ಯಾಹ್ನ 2 ಗಂಟೆಗೆ ಕ್ರೀಡಾಪಟುಗಳೊಂದಿಗೆ ಪ್ರಭಾತಪೇರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆಯಲಿದೆ. ಕಾರ್ಯಕ್ರಮ ಉದ್ಘಾಟನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಆಗಮಿಸಲಿದ್ದಾರೆ. ಕ್ರೀಡಾ ಧ್ವಜಾರೋಹಣವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ನೆರವೇರಿಸಲಿದ್ದಾರೆ. ಸಾಬೂನು- ಮಾರ್ಜಕ ನಿಗಮದ ಅಧ್ಯಕ್ಷ- ಶಾಸಕ ಸಿ.ಎಸ್.ನಾಡಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಬಿಡುಗಡೆ ಮಾಡುವರು. ಜಿಲ್ಲೆಯ ಎಲ್ಲ ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಆಗಮಿಸಲಿದ್ದಾರೆ ಎಂದರು.

ನಿವೃತ್ತ ದೈಹಿಕ ಶಿಕ್ಷಕ ಆರ್.ಎಲ್.ಕೊಪ್ಪದ ಮಾತನಾಡಿ, ನ.3 ರಂದು ಕಾರ್ಯಕ್ರಮ ಉದ್ಘಾಟನೆ ನಂತರ ಪ್ರದರ್ಶನ ಪಂದ್ಯ ನಡೆಯಲಿದೆ. 4 ರಂದು ಸಂಜೆ 6 ಗಂಟೆಯಿಂದ 9 ಗಂಟೆವರೆಗೆ ಹೊನಲು ಬೆಳಕಿನ ಪಂದ್ಯ ನಡೆಯಲಿದೆ. ಕ್ರೀಡಾಪಟುಗಳಿಗಾಗಿ ಊಟದ ಜತೆಗೆ ತತ್ತಿ, ಬಾಳೆ ಹಣ್ಣು ನೀಡಲು ಒದಗಿಸಲಾಗುವುದು. ಕ್ರೀಡಾಕೂಟ ವೀಕ್ಷಣೆಗೆ 500 ಮೀಟರ್ ಗ್ಯಾಲರಿ ನಿರ್ಮಿಸಲಾಗುತ್ತಿದೆ ಎಂದರು.

ಘನಮಠೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎಂ.ಸಜ್ಜನ, ಶಿಕ್ಷಕ ಶ್ರೀಕಾಂತ ಪತ್ತಾರ ಮಾತನಾಡಿದರು.

ಎಸ್.ಎಸ್.ವಿದ್ಯಾಸಂಸ್ಥೆ ಕಾರ್ಯದರ್ಶಿ ಸಚೀನ ಪಾಟೀಲ, ಆಡಳಿತಾಧಿಕಾರಿ ಕಿರಣ ಪಾಟೀಲ, ಮುಖಂಡರಾದ ಪ್ರಭುಗೌಡ ಮದರಕಲ್ಲ, ಡಾ.ನಜೀರ ಕೋಳ್ಯಾಳ, ಎಸ್.ಎಸ್.ಕಂತಲಗಾವಿ, ಬಾಪುಗೌಡ ಪಾಟೀಲ, ಬಿ.ಆರ್.ಪೊಲೀಸ್‌ಪಾಟೀಲ, ಬಿ.ಬಿ.ಬಿರಾದಾರ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ವಿ.ಮಂಗ್ಯಾಳ, ಎಂ.ಎಸ್.ರಾಯಗೊಂಡ, ಪ್ರಾಚಾರ್ಯ ಎಂ.ಎಸ್.ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net