

ಯಳಂದೂರು: ಯಳಂದೂರು ಪಟ್ಟಣದಲ್ಲಿ ಕರ್ನಾಟಕ ರಾಜ್ಯ ವಿದ್ಯಾವಂತ ನಿರುದ್ಯೋಗ ಸಂಘದ ವತಿಯಿಂದ ರಾಜ್ಯ ಮಟ್ಟದ ವಾಲಿಬಾಲ್ ಅಥವಾ ಕಬಡ್ಡಿ ಪಂದ್ಯಾವಳಿಯನ್ನು ನಡೆಸಲು ಯೋಜನೆ ರೂಪಿಸಲಾಗಿದ್ದು ಈ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಮಾಹಿತಿ ಕಲೆ ಹಾಕಲು ಶನಿವಾರ ತಾಲೂಕಿನಾದ್ಯಂತ ಬೈಕ್ ಜಾಥಾ ಆಯೋಜಿಸಲಾಗಿತ್ತು.
ಈ ಬೈಕ್ ಜಾಥಾಕ್ಕೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಕರ್ನಾಟಕ ರಾಜ್ಯ ವಿದ್ಯಾವಂತ ನಿರುದ್ಯೋಗ ಸಂಘದ ಅಧ್ಯಕ್ಷ ಕೂಡ್ಲೂರು ಶ್ರೀಧರಮೂರ್ತಿ ಚಾಲನೆ ನೀಡಿ ಮಾತನಾಡಿ, ಯಳಂದೂರು ಪಟ್ಟಣದಲ್ಲಿ ನಮ್ಮ ಸಂಘದ ವತಿಯಿಂದ ರಾಜ್ಯ ಮಟ್ಟದ ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಲು ತಾಲೂಕು ವ್ಯಾಪ್ತಿಯ 33 ಗ್ರಾಮಗಳಿಗೂ ಬೈಕ್ ರ‌್ಯಾಲಿ ಮೂಲಕ ತೆರಳಿ, ಗ್ರಾಮಗಳಲ್ಲಿರುವ ಎಲ್ಲ ಜನಾಂಗಗಳ ಮುಖಂಡರು, ಸಮಾಜ ಸೇವಕರು, ದಾನಿಗಳನ್ನು ಭೇಟಿ ಮಾಡಿ ಅವರ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ. ಅಲ್ಲದೆ ಅವರಿಗೆ ಜ.10 ರಂದು ಪಟ್ಟಣದ ಷಡಕ್ಷಕರ ದೇವರ ಗದ್ದುಗೆ ಬಳಿ ಸಭೆ ನಡೆಸಲು ಯೋಜನೆ ರೂಪಿಸಲಾಗಿದೆ.
ಅಲ್ಲಿ ಪಂದ್ಯಾವಳಿ ನಡೆಸುವ ಬಗ್ಗೆ ಎಲ್ಲರಿಂದಲೂ ಅಭಿಪ್ರಾಯವನ್ನು ಸಂಗ್ರಹಿಸಿ, ದಿನಾಂಕ, ಸ್ಥಳ ಹಾಗೂ ಹೇಗೆ ಕಾರ್ಯಕ್ರಮವನ್ನು ರೂಪಿಸಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಮಹದೇವಯ್ಯ, ಪುಟ್ಟಮಾದಯ್ಯ, ಚಕ್ರವರ್ತಿ, ಚಂದ್ರಶೇಖರ್, ರಾಜಶೇಖರ್, ವಿ.ಬಸವರಾಜು, ನಂಜುಂಡಸ್ವಾಮಿ ಡಾ.ದೊಡ್ಡರಾಜು, ಶಶಿಧರ್, ಸಿದ್ದರಾಜು, ಶಂಕರಮೂರ್ತಿ, ಗೋವಿಂದ, ಗುರುಸಿದ್ದಯ್ಯ, ಎಚ್.ಎಂ. ಬಸವಣ್ಣ, ಮಾಂಬಳ್ಳಿ ಮಲ್ಲು, ರಾಚಯ್ಯ, ಶ್ರೀನಿವಾಸ್ ಸೇರಿದಂತೆ ಅನೇಕರು ಇದ್ದರು.