

ಶಿರಹಟ್ಟಿ: ಬಸವಾದಿ ಶರಣರ ಅನುಭಾವದ ನುಡಿಗಳು ವಚನಗಳಾಗಿ ಹೊರಹೊಮ್ಮಿ ಪ್ರತಿಯೊಬ್ಬರ ನಾಲಿಗೆ ಮೇಲಿವೆ. ಸಾಹಿತ್ಯದ ನಿಧಿಗಳಾದ ವಚನಗಳು ವಿಶ್ವ ಮಾನ್ಯತೆ ಪಡೆಯುವಂತಾಗಿವೆ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನುಡಿದರು.
ಅಖಿಲ ಭಾರತ ವಚನ ಸಾಹಿತ್ಯ, ಸಾಂಸ್ಕೃತಿಕ ಪರಿಷತ್ತು, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಸಿರಿಗನ್ನಡ ವೇದಿಕೆ ಸಹಯೋಗದಲ್ಲಿ ಪಟ್ಟಣದ ಫಕೀರೇಶ್ವರ ಮಠದ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ವಚನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆಗೆ ಹೋರಾಡುವ ಮೂಲಕ ಬಸವಾದಿ ಶರಣರು ತಮ್ಮ ಅನುಭಾವದ ನುಡಿಗಳನ್ನು ವಚನದ ಮೂಲಕ ಕೊಡುಗೆಯಾಗಿ ನೀಡಿದ್ದಾರೆ. ವಚನಗಳನ್ನು ವಿಶ್ಲೇಷಣೆ ಮಾಡಿದಾಗ ಅವು ಯಾವುದೇ ಜಾತಿ, ಧರ್ಮ, ವರ್ಗ, ಪಂಗಡಕ್ಕೆ ಸೀಮಿತವಾಗಿರದೇ ಜನಮಾನಸಕ್ಕೆ ಮುಟ್ಟುಸುವ ನಿಧಿಗಳಾಗಿವೆ. ಕುರಾನ್, ಬೈಬಲ್ ಹೇಗೆ ಆರಾಧಿಸಲ್ಪಡುತ್ತವೆಯೋ ಅದೇ ರೀತಿ ವಚನ ದೀಪ್ತಿಗಳು ಕಾಣಸಿಗಬೇಕು ಎಂದು ನುಡಿದರು.
ಶರಣರ ವಚನಗಳನ್ನು ಸಂಗ್ರಹಿಸಿ, ಸಂರಕ್ಷಿಸುವ ಮೂಲಕ ಅವುಗಳ ಸಾರವನ್ನು ನಾಡಿನಾದ್ಯಂತ ಪಸರಿಸಿ ಜನಮಾನಸಕ್ಕೆ ಮುಟ್ಟಿಸುವಲ್ಲಿ ಡಾ. ಫ.ಗು. ಹಳಕಟ್ಟಿ ಅವಿರತವಾಗಿ ಶ್ರಮಿಸಿದರು. ಹಾನಗಲ್ ಕುಮಾರಸ್ವಾಮಿಯವರು ಹಳಕಟ್ಟಿಯವರಿಗೆ ಪ್ರೇರಣೆ ನೀಡಿ ಸಹಾಯ, ಸಹಕಾರ ನೀಡಿದ್ದರು ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಶರಣರ ನಡೆ, ನುಡಿ, ಆಚಾರ, ವಿಚಾರಗಳನ್ನು ಆಚರಣೆಗೆ ತರುವಲ್ಲಿ ವಿಫಲರಾಗಿದ್ದರಿಂದ ಜಗತ್ತು ವಿನಾಶದತ್ತ ಸಾಗುತ್ತಿದೆ. ಬಸವತತ್ವ ಮಠಗಳಲ್ಲಿಯೇ ಉಳಿದಿಲ್ಲ. ಬಸವಣ್ಣವರ ಮಹಿಳಾ ಸ್ವಾತಂತ್ರೃ, ಅಸ್ಪಶ್ಯತೆ ನಿವಾರಣೆ ಮೂಲಕ ಸಮಸಮಾಜದ ನಿರ್ಮಾಣದ ಕನಸು ಈಡೇರಿಲ್ಲ. ಕಾಯಕವೇ ಕೈಲಾಸ ತತ್ವನಿಷ್ಠೆಯಿಂದ ಮಾಡಿದ ಕಾಯಕ ಸರ್ವಶ್ರೇಷ್ಠವಾದುದು. ಇಂಥ ಅಮೃತವಾಣಿ ಬದಿಗಿಟ್ಟು ಮತದ ಆಸೆಗಾಗಿ ಜನರಿಗೆ ಆಮಿಷವೊಡ್ಡಿ ಏನೆಲ್ಲ ಸವಲತ್ತುಗಳನ್ನು ನೀಡಿದರೆ ಮುಂದೆ ದುರ್ಭಿಕ್ಷೆಗೆ ಜನರನ್ನು ತಳ್ಳುವುದು ಗ್ಯಾರಂಟಿ ಎಂದು ವ್ಯಂಗ್ಯವಾಡಿದರು.ಮಕ್ಕಳ ಸಾಹಿತಿ ಡಾ. ರಾಜೇಂದ್ರ ಗಡಾದ ರಚಿಸಿದ ಮಕ್ಕಳ ವಚನ ಸಂಕಲನ ಬಿಡುಗಡೆ ಮಾಡಿದ ಅ.ಭಾ.ವ.ಸಾ. ಪರಿಷತ್ತು ಸಂಸ್ಥಾಪಕ ಎನ್. ತಿಮ್ಮಪ್ಪ, ಮಾನವರಾಗಿ ಭೂಮಿಗೆ ಅವತರಿಸಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದರೆ ಬದುಕು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರು ಬಸವಾದಿ ಶರಣರ ವಚನಗಳನ್ನು ಸಂಗ್ರಹಿಸಿ, ಸಂರಕ್ಷಿಸುವ ಜತೆಗೆ ತಮ್ಮ ಮನೆ ಮಾರಿ ಅವುಗಳನ್ನು ಮುದ್ರಿಸಿ ಜನಮಾನಸಕ್ಕೆ ತಲುಪಿಸಿದ್ದರಿಂದ ಅವು ನಿತ್ಯ ನೂತನವಾಗಿವೆ. ನಾವು ಅವರದೇ ಮಾರ್ಗದಲ್ಲಿ ಸಾಗುವ ಮೂಲಕ ವಚನ ಸಾಹಿತ್ಯದ ತತ್ವ, ಸಿದ್ಧಾಂತಗಳು ಜನಮಾನಸಕ್ಕೆ ತಲುಪಿಬೇಕಾಗಿದೆ ಎಂದು ಹೇಳಿದರು.