

ಮಂಡ್ಯ: ಇತ್ತೀಚಿನ ಬರಹಗಾರರಲ್ಲಿ ಅಧ್ಯಯನಶೀಲತೆಯ ಕೊರತೆ ಇದೆ. ಅವರ ರಚನೆಗಳಲ್ಲಿ ಹಸಿ ಹಸಿಯಾದ ಭಾವನೆಗಳ ಅಭಿವ್ಯಕ್ತಿ ಎದ್ದು ಕಾಣುತ್ತದೆ ಎಂದು ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷರೂ ಆದ ಸಾಹಿತಿ ಟಿ.ಸತೀಶ್ ಜವರೇಗೌಡ ವಿಷಾದ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಅಳಿಲು ಸೇವಾ ಬಳಗದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಯುಗಾದಿ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಾತೇ ಕವಿತೆಯಾಗಬಾರದು. ಕವಿಯ ಭಾವ ಲಹರಿ, ಕಲ್ಪನಾ ಲಹರಿ, ಚಿಂತನಾ ಲಹರಿ, ವಿಚಾರ ಲಹರಿ ಸಮ್ಮಿಳಿತಗೊಂಡು ಕವಿತೆ ರಚನೆಗೊಳ್ಳಬೇಕು. ಶಬ್ದಾರ್ಥ ಮತ್ತು ಭಾವಾರ್ಥ ಒಡಗೂಡಿದ ಕಾವ್ಯಕ್ಕೆ ಕಲಾತ್ಮಕ ಸ್ಪರ್ಶ ನೀಡಿದಾಗ ಉತ್ತಮ ಕಾವ್ಯವಾಗುತ್ತದೆ ಎಂದು ವಿಶ್ಲೇಷಿಸಿದರು.
ಕವಿಗೆ ಪ್ರಶಸ್ತಿ, ಸನ್ಮಾನ, ಪುರಸ್ಕಾರ, ಬಹುಮಾನದ ಹಪಾಹಪಿಕೆ ಇರಬಾರದು. ತನ್ನ ಪಾಡಿಗೆ ತಾನು ಸೃಜನಶೀಲವಾದ ಉತ್ತಮ ಸಾಹಿತ್ಯ ಕೃಷಿ ಮಾಡುತ್ತಾ ಹೋಗಬೇಕು. ತಾನು ಬರೆದ ಸಾಹಿತ್ಯಕ್ಕೆ ತಾನೇ ಮೊದಲ್ ಓದುಗನಾಗಿ, ಸಹೃದಯ ಓದುಗನಾಗಿ, ಕಟು ವಿಮರ್ಶಕನಾಗಬೇಕು. ಬರೆದಿದ್ದನ್ನು ಒಂದು ಕಾಲಾಂತರದಲ್ಲಿ ಓದಿ, ತಿದ್ದಿ, ಮತ್ತಷ್ಟು ಪರಿಷ್ಕರಿಸಿ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಕವಿಗಳು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸದೆ, ತಮ್ಮ ಸಾಹಿತ್ಯದ ಮೂಲಕ ಮಾನವ ಧರ್ಮದ ಪ್ರತಿಪಾದನೆ ಮಾಡಬೇಕು. ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಶ್ರೇಷ್ಠ. ಕಾವ್ಯ ನಿತ್ಯವೂ ಹೊಸತಾದುದು. ಆದ್ದರಿಂದ ಕವಿಗಳು ಲೋಕಾನುಭವಗಳನ್ನು ಗ್ರಹಿಸಿ ಬರೆಯಬೇಕು. ಸಾಹಿತ್ಯ ರಚನೆಯಿಂದ ಇತಿಹಾಸ ಹಾಗೂ ಪರಂಪರೆ ಉಳಿಯುತ್ತದೆ. ಜತೆಗೆ ಮನುಷ್ಯರನ್ನು ಮನುಷ್ಯರಂತೆ ಪ್ರೀತಿಸುವ, ಗೌರವಿಸುವ ಮನೋಭಾವ ಬೆಳೆಸುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಂ.ಬಾಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ಜೆ.ರಾಜು ಗುಂಡಾಪು, ಅಳಿಲು ಸೇವಾ ಬಳಗದ ಅಧ್ಯಕ್ಷ ರವಿಕಿರಣ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಇತರರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಲುಮರದ ನಾಗರಾಜು, ಬಿ.ಎಸ್.ಬಾಲಸುಬ್ರಹ್ಮಣ್ಯ, ಭಾನುಪ್ರಿಯ, ರಾಘವೇಂದ್ರ, ಚುಂಚಣ್ಣ ಕಲ್ಲಾರೆಪುರ, ಕೃಷ್ಣಮೂರ್ತಿ, ವಿ.ಎಲ್.ಬಸವರಾಜು, ಎಸ್.ಎಸ್.ಚಂದ್ರಕಾಂತ್, ಪಿಡಿಒ ಜಯಸ್ವಾಮಿ, ರಾಜು ಪೂರಿಗಾಲಿ, ಕೆ.ಎಂ.ಕೃಷ್ಣಮೂರ್ತಿ, ರಾಜೇಂದ್ರ, ಮಹಾಲಿಂಗಯ್ಯ ಯಮದೂರು, ಆನಂದ್ ಅವರನ್ನು ಸನ್ಮಾನಿಸಲಾಯಿತು.