ಸಂವಿಧಾನ ಗೌರವಿಸುವ ಮನಸ್ಸುಗಳು ಒಂದಾಗೋಣ: ವಿಚಾರವಾದಿ ಜಿ.ಎನ್.ನಾಗರಾಜು ಹೇಳಿಕೆ

State level study camp Mandya
Published on

ಮಂಡ್ಯ: ಕೆಲವು ರಾಜ್ಯಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಗಣತಿ ಮಾಡುತ್ತಾರೆ. ಅದೇ ಚುನಾವಣೆ ಮುಗಿದ ಮೇಲೆ ಮರೆತು ಬಿಡುತ್ತಾರೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿ ನಾಲ್ಕು ವರ್ಷ ಕಳೆದರೂ ಆಗಿಲ್ಲ. ಸಧ್ಯಕ್ಕೆ ಜಾತಿಗಣತಿ ಸಮೇತ ಎರಡನ್ನೂ ಮಾಡುತ್ತೇವೆಂದು ಹೇಳುತ್ತಾರೆ. ಆದರೆ ಅದನ್ನು ಯಾವಾಗ ಮಾಡಲಾಗುತ್ತದೆ ಎಂಬುದನ್ನು ಮಾತ್ರ ಹೇಳಿಲ್ಲ ಎಂದು ವಿಚಾರವಾದಿ ಜಿ.ಎನ್.ನಾಗರಾಜು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ದಲಿತ ಹಕ್ಕುಗಳ ಸಮಿತಿ(ಕರ್ನಾಟಕ)ದ ಸಹಯೋಗದಲ್ಲಿ ಆಯೋಜಸಿದ್ದ ಜಾತಿ ಅಸ್ಪೃಶ್ಯತೆ ನಿವಾರಣೆ ಮತ್ತು ಐಕ್ಯತೆಗಾಗಿ ದಲಿತರ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿ ಕುರಿತು ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಚುನಾವಣೆ ವೇಳಾಪಟ್ಟಿಯಂತೆ ಮತದಾರರ ಪರಿಷ್ಕರಣೆ, ನಾಮಪತ್ರ ಸಲ್ಲಿಸುವುದು ಮತ್ತು ತಿರಸ್ಕಾರಗೊಳ್ಳುವುದು ಸೇರಿದಂತೆ ಹಲವು ನಿಯಮಗಳಿರುವಂತೆಯೇ ಜನಗಣಿತಿ ಸಮೀಕ್ಷೆಯ ಪಟ್ಟಿ ಇರಬೇಕು. ಸಮೀಕ್ಷೆ ನಡೆಸುತ್ತೇವೆಂದು ಸರ್ಕಾರಗಳು ದಿಢೀರ್ ಎಂದು ಘೋಷಣೆ ಮಾಡಿವೆ. ಅದನ್ನು ಈಗಲಾದರೂ ಮಾಡುತ್ತಾರೆಯೇ ನೋಡಬೇಕು. ಒಳಜಾತಿಗಳ ಮೀಸಲಾತಿಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲಾಗುತ್ತಿದೆ. ಇದನ್ನು ಸಮರ್ಪಕವಾಗಿ ಮಾಡಲಿ. ಜತೆಗೆ ಒಳಮೀಸಲಾತಿ ಘೋಷಣೆ ಮಾಡಲಿ ಎಂದು ಒತ್ತಾಯಿಸಿದ ಅವರು, ದಲಿತರು ಮತ್ತು ದಲಿತೇತರರ ಒಗ್ಗಟ್ಟಿನ ಮೂಲಕ ಮಾನವೀಯ ಭಾವನೆ, ಸಂವಿಧಾನ ಗೌರವಿಸುವ ಮನಸ್ಸುಗಳು ಒಂದಾಗಿ ಜಾತಿಗಳ ನಡುವೆ ನಡೆಯುವ ದೌರ್ಜನ್ಯವನ್ನು ತಡೆಗಟ್ಟೋಣ ಎಂದು ಕರೆ ನೀಡಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಹಳ್ಳಿಗಳಿಗೆ ಅಧಿಕಾರಿಗಳು ಬರಬೇಕಿದ್ದರೆ ರೈತ ಸಂಘದವರ ಒಪ್ಪಿಗೆ ಪಡೆದು ಬರಬೇಕಿತ್ತು. ಅಂತಹ ಸನ್ನಿವೇಶವನ್ನು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ನಿರ್ಮಾಣ ಮಾಡಿದ್ದರು. ದಲಿತ ಚಳವಳಿಗಳು ಅದೇ ಮಾದರಿಯಲ್ಲಿ ಸಾಗುತ್ತಿರುವಾಗಲೇ ಪ್ರಸ್ತುತ ಕೇವಲ ಮುಂಚೂಣಿಯಲ್ಲಿರುವ ಒಬ್ಬ ವ್ಯಕ್ತಿಯ ತೋರ್ಪಡಿಕೆಗಾಗಿ ಮಾತ್ರ ಹೋರಾಟ ಉಳಿದಿರುವುದು ದುರಂತ. ಇದು ಬದಲಾಗಬೇಕು. ಮತ್ತೆ ದಲಿತ ಸಂಘಟನೆಗಳು ಒಂದಾಗಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಹಕ್ಕುಗಳ ಸಮಿತಿ ರಾಜ್ಯ ಕಾರ್ಯದರ್ಶಿ ರಾಜಣ್ಣ, ದಲಿತ ಚಳವಳಿ ನಮ್ಮ ರಾಜ್ಯದಲ್ಲಿ ಹೇಗಿತ್ತು ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟವಾಗಿದೆ. ಜೀತ ಪದ್ಧತಿ, ಬೆತ್ತಲೆ ಸೇವೆ, ಮಡೆ ಸ್ನಾನ ಸೇರಿದಂತೆ ಇವೆಲ್ಲವನ್ನೂ ದಲಿತ ಚಳವಳಿ ಮೂಲಕ ನಿಲ್ಲಿಸಲಾಗಿದೆ. ದಲಿತ ಹುಡಗನೊಬ್ಬ ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸಿದರೆ ಮರ್ಯಾದೆ ಹತ್ಯೆ ಮಾಡಲಾಗುತ್ತದೆ. ದಲಿತರಿಗೆ ಈಗಲೂ ಗ್ರಾಮಗಳಲ್ಲಿ ಕ್ಷೌರ ಮಾಡುತ್ತಿಲ್ಲ. ಜತೆಗೆ ದೇವಾಲಯಗಳಿಗೂ ಸೇರಿಸುತ್ತಿಲ್ಲ. ಒಟ್ಟಿನಲ್ಲಿ ದಲಿತರ ಮೇಲೆ ದೌರ್ಜನ್ಯ ಮಾಡಿದರೆ ನಾವು ಗೆಲ್ಲುತ್ತೇವೆ ಎಂಬುವ ಸಂದರ್ಭವನ್ನು ಕಾಣುತ್ತಿದ್ದೇವೆ ಎಂದು ವಿಷಾದಿಸಿದರು.

ಸಮಿತಿಯ ರಾಜ್ಯ ಉಪಾಧ್ಯಕ್ಷ ಬಿ.ರಾಜಶೇಖರಮೂರ್ತಿ, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷೆ ಸಿ.ಕುಮಾರಿ, ಜಿಲ್ಲಾಧ್ಯಕ್ಷ ಆರ್.ಕೃಷ್ಣ, ಕಾರ್ಯದರ್ಶಿ ಅಂಬೂಜಿ, ಮುಖಂಡ ನಂಜುಂಡಮೌರ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net