ಪತ್ತಿನ ಸಹಕಾರಿ ಸಂಘಗಳ ಪಾತ್ರ ನಿರ್ಣಾಯಕ: ಬೆಲ್ಲದ

28 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಗ್ರಾಮೀಣ ಭಾಗದ ಆರ್ಥಿಕ ಬೆಳವಣಿಗೆಯಲ್ಲಿ ಪತ್ತಿನ ಸಹಕಾರಿ ಸಂಘಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ದಿಸೆಯಲ್ಲಿ ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ನಗರದ ರಾಯಾಪೂರ ಕೆಎಂಎಫ್‌ನಲ್ಲಿ ಜಿಲ್ಲೆಯ ಪತ್ತಿನ ಹಾಗೂ ನೌಕರರ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣಗೊಳಿಸುವ ಮೊದಲು ಪಟ್ಟಣ ಪತ್ತಿನ ಸಹಕಾರಿ ಸಂಘಗಳು ಸಹಕಾರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಸದಸ್ಯರಿಗೆ ಸಕಾಲದಲ್ಲಿ ಆರ್ಥಿಕ ನೆರವು ಒದಗಿಸಿ ಬಡವರ ಅಭ್ಯುದಯಕ್ಕೆ ಕಾರಣವಾಗಿವೆ. ಪತ್ತಿನ ಸಹಕಾರಿ ಸಂಘಗಳು ಆರ್ಥಿಕವಾಗಿ ಸದೃಢವಾಗಿ ಜನರ ಬದುಕಿಗೆ ಆಸರೆಯಾಗುವ ಮುಖಾಂತರ ಗತವೈಭವಕ್ಕೆ ಮರಳಬೇಕು ಎಂದರು.

ಕರ್ನಾಟಕ ಸಹಕಾರ ಮಹಾಮಂಡಳದ ನಿರ್ದೇಶಕ ಬಾಪುಗೌಡ ಡಿ. ಪಾಟೀಲ ಮಾತನಾಡಿ, ಸಂಘದ ವ್ಯವಹಾರದಲ್ಲಿ ಎದುರಾಗುವ ತೊಂದರೆಗಳನ್ನು ನಿವಾರಿಸಿಕೊಳ್ಳಲು ತರಬೇತಿ ಶಿಬಿರ ಪ್ರಯೋಜನಕಾರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಂಕರಪ್ಪ ರಾಯನಾಳ ಮಾತನಾಡಿ, ಸಹಕಾರ ಚಳವಳಿ ಹುಟ್ಟು ಹಾಕಿದ ಧಾರವಾಡ ಜಿಲ್ಲೆಯಲ್ಲಿ ಸಹಕಾರ ರಂಗ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬುದು ಕಳವಳಕಾರಿ. ಸಂಘಗಳ ನಿರ್ವಹಣೆಯಲ್ಲಿ ಸರ್ಕಾರ ರೂಪಿಸುವ ಸಹಕಾರ ಕಾಯ್ದೆಗಳ ಅರಿವು ಎಲ್ಲರಿಗೂ ಅಗತ್ಯ ಎಂದರು.

ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ರಾಜ್ಯ ಸಹಕಾರ ಮಹಾಮಂಡಳ ನಿದೇಶಕರಾದ ಜಿ.ಪಿ. ಪಾಟೀಲ, ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷೆ ಗೀತಾ ಕುಂಬಿ, ನಿರ್ದೇಶಕರಾದ ಮಲ್ಲಿಕಾರ್ಜುನ ಹೊರಕೇರಿ, ಫಕ್ಕೀರಗೌಡ ಕಲ್ಲನಗೌಡ್ರ ಮತ್ತು ಸದಾಶಿವಗೌಡ ಪಾಟೀಲ ವೇದಿಕೆಯಲ್ಲಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ ಬಿ.ವಿ. ರವಿಂದ್ರನಾಥ, ಸಾಗರ ಹಾಗೂ ಶಿವಾನಂದ ಕುಲಕರ್ಣಿ ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net