ಜೂ.7ರಿಂದ ರಾಜ್ಯಮಟ್ಟದ ಗಾಯನ ಸ್ಪರ್ಧೆ

MDG music
Published on

ಮೂಡಿಗೆರೆ: ಮೂಡಿಗೆರೆ ಅವಿನ್ ಸ್ವರ ಸಂಗಮದಿಂದ ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಜೂ.7ರಿಂದ 9ರವರೆಗೆ ರಾಜ್ಯಮಟ್ಟದ ಸಂಗೀತ ಸಮರ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಅವಿನ್ ಸ್ವರ ಸಂಗಮದ ನಿರ್ದೇಶಕ ಮಗ್ಗಲಮಕ್ಕಿ ಗಣೇಶ್ ತಿಳಿಸಿದರು.

ಅವಿನ್ ಸ್ವರಸಂಗಮದ ಫೇಸ್‌ಬುಕ್ ಲೈವ್ ಪ್ರಾರಂಭಗೊಂಡು ಎರಡೂವರೆ ವರ್ಷ ಕಳೆದಿದ್ದು, ಜಿಲ್ಲೆಯಲ್ಲಿರುವ 3 ರಿಂದ 80 ವರ್ಷದವರೆಗಿನ 400ಕ್ಕೂ ಅಧಿಕ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪರಿಚಯಿಸಿದೆ. ಪ್ರತಿ 100 ಸಂಚಿಕೆಗೊಮ್ಮೆ ವಿಶೇಷವಾಗಿ ಗಾಯನ ಸ್ಪರ್ಧೆ ಏರ್ಪಡಿಸುವ ಮೂಲಕ ಕಲಾವಿದರನ್ನು ರಾಜ್ಯಮಟ್ಟದಲ್ಲಿ ಗುರುತಿಸುವ ಕಾರ್ಯ ಮಾಡಲಾಗಿದೆ. 400ನೇ ಸಂಚಿಕೆ ಸಂಭ್ರಮಾಚರಣೆ ಹಿನ್ನ್ನೆಲೆಯಲ್ಲಿ ರಾಜ್ಯಾದ್ಯಂತ ಗಾಯಕರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಿರ್ದೇಶಕ ಬಕ್ಕಿ ಮಂಜು ಮಾತನಾಡಿ, ರಾಜ್ಯ ಮಟ್ಟದ ಸಂಗೀತ ಸಮರಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ನಡೆಸಿದ್ದು, 50ಕ್ಕೂ ಹೆಚ್ಚಿನ ಗಾಯಕರು ಗಾಯನದ ವಿಡಿಯೋ ತುಣುಕು ಕಳಿಸಿದ್ದಾರೆ. ಇನ್ನೂ 400 ಗಾಯಕರಿಂದ ಗಾಯನದ ವಿಡಿಯೋ ಬರುವ ನಿರೀಕ್ಷೆಯಿದೆ. ಇದಕ್ಕೆ ಮೇ 18 ಕೊನೇ ದಿನ. ನಮಗೆ ತಲುಪಿದ ಗಾಯನ ವಿಡಿಯೋ ಪರಿಶೀಲಿಸಿ 50ರಿಂದ 60 ಗಾಯಕರನ್ನು ಆಯ್ಕೆ ಮಾಡಿ, ಜೂ.7 ಮತ್ತು 8ರಂದು ಗಾಯನ ಸ್ಪರ್ಧೆ ನಡೆಸುವ ಮೂಲಕ ಕ್ವಾರ್ಟರ್, ಸೆಮಿಫೈನಲ್ ಮತ್ತು ಫೈನಲ್‌ಗೆ ಆಯ್ಕೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಗಾಯಕರಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಪ್ರಥಮ ಬಹುಮಾನ ಟ್ರೋಫಿ ಸಹಿತ 25,000 ರೂ., ದ್ವಿತೀಯ 13,000 ರೂ., ತೃತೀಯ 8,000 ರೂ. ಹಾಗೂ 10 ಮಂದಿಗೆ 2,000 ರೂ. ನೀಡಲಾಗುತ್ತದೆ. ವಿವರಕ್ಕೆ 9448667558, 9448305990 ಸಂಪರ್ಕಿಸಬಹುದು ಎಂದು ಹೇಳಿದರು. ನಿರ್ದೇಶಕರಾದ ಬಕ್ಕಿ ರವೀಂದ್ರ, ಹಸೈನಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net