ದೇಶದಲ್ಲಿ ಗಂಭೀರ ಸ್ಥಿತಿಯಲ್ಲಿರುವ ಕೃಷಿ: ಕಿಸಾನ್ ಸಭಾದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಿ.ರವೀಂದ್ರನ್ ಬೇಸರ

State level seminar Mandya
Published on

ಮಂಡ್ಯ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರೈತರ ಆತ್ಮಹತ್ಯೆ ಹೆಚ್ಚಳವಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಿ.ರವೀಂದ್ರನ್ ಆರೋಪಿಸಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಆಯೋಜಿಸಿದ್ದ ಸಾಮ್ರಾಜ್ಯಶಾಹಿ ದೇಶಗಳ ಸುಂಕ ಕಡಿತದ ಒತ್ತಡ ಮತ್ತು ಕರ್ನಾಟಕ ರಾಜ್ಯದ ರೈತರ ಮೇಲಿನ ದುಷ್ಪರಿಣಾಮಗಳ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ರೈತರು ಶೇ.86ರಷ್ಟು ಸಾಲದಲ್ಲಿ ಸಿಲುಕಿದ್ದಾರೆ. ಗಂಭೀರವಾದ ಕೃಷಿ ಬಿಕ್ಕಟ್ಟು ಎದುರಿಸುತ್ತಿರುವುದನ್ನು ನಾವು ಪ್ರಸ್ತುತದಲ್ಲಿ ಗಮನಿಸುತ್ತಿದ್ದೇವೆ ಎಂದರು.

ಕೃಷಿ ಕ್ಷೇತ್ರದ ಮೇಲೆ ಗಂಭೀರವಾದ ಬದಲಾವಣೆಯು ಗ್ರಾಮೀಣ ಕೃಷಿಕರ ಮೇಲೂ ಪರಿಣಾಮ ಬೀರುತ್ತಿದೆ. ದೇಶದ ಶೇ.55 ರಷ್ಟು ಜನಸಂಖ್ಯೆ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಕರ್ನಾಟಕದಲ್ಲಿ 112 ಲಕ್ಷ ಎಕರೆಯಷ್ಟು ಕೃಷಿ ಭೂಮಿಯು ಬಳಕೆಯಲ್ಲಿದೆ. ಈ ಅಂಕಿ ಅಂಶವು 2021 ರದ್ದಾಗಿದೆ. ಇವತ್ತು ಶೇ.58.6 ರಷ್ಟು ರಾಜ್ಯದಲ್ಲಿ ಒಟ್ಟು ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

2023ರಲ್ಲಿ ಸುಮಾರು 2500 ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡುತ್ತಿದ್ದೆವು. ಈಗ 3000 ಮೆಟ್ರಿಕ್ ಟನ್‌ನಷ್ಟು ಆಹಾರ ಉತ್ಪಾದನೆ ಮಾಡುತ್ತಿದ್ದೇವೆ. ಈ ಬೆಳೆವಣಿಗೆಯು ಕೇಂದ್ರ ಸರ್ಕಾರದ ಯಾವುದೇ ನಿರ್ದಿಷ್ಟ ಯೋಜನೆ ಇಲ್ಲದೆಯೇ ರೈತರು ಸ್ವಯಂ ಪ್ರೇರಿತವಾಗಿ ಬೆಳೆ ಬೆಳೆಯುವ ಮೂಲಕ ಉತ್ಪಾದನೆಯಲ್ಲಿ ಹೆಚ್ಚಳ ಕಾಣಲು ಸಾಧ್ಯವಾಗಿದೆ. ನಮ್ಮ ದೇಶದಲ್ಲೇ ವಸ್ತುಗಳನ್ನು ಉತ್ಪಾದನೆ ಮಾಡುತ್ತಿದ್ದರೂ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದೇಕೆ?. ಇದರಿಂದ ಯಾರಿಗೆ ಲಾಭ ನಷ್ಟ ಹಾಗೂ ಇದರ ಹಿಂದಿರುವ ಉದ್ದೇಶವೇನು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಅಡುಗೆ ಎಣ್ಣೆಯನ್ನು ಬಳಸುತ್ತೇವೆ. ಆದರೆ ಭಾರತದಲ್ಲಿ ಶೇ.60 ರಷ್ಟು ಅಡುಗೆ ಎಣ್ಣೆಯನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಸ್ಥಳೀಯವಾಗಿಯೇ ನಾವು ಸೂರ್ಯಕಾಂತಿ, ಕಡಲೆಬೀಜಗಳನ್ನು ನಮ್ಮ ದೇಶದಲ್ಲಿಯೇ ಬೆಳೆಯುತ್ತಿದ್ದೇವೆ. ಇಷ್ಟಿದ್ದರೂ ಎಣ್ಣೆ ಆಮದು ಅವಶ್ಯಕತೆ ಇದಿಯೇ ಎಂದರು.

ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಮಾತನಾಡಿ, ಅಡಿಕೆ ಎಲೆಗಳಿಂದ ತಯಾರಿಸಿದ ತಟ್ಟೆ, ಲೋಟ ಇತರೆ ವಸ್ತುಗಳನ್ನು ಬಳಸಿದರೆ ಕ್ಯಾನ್ಸರ್ ಬರುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ಹೇಳುತ್ತಾರೆ. ಕರ್ನಾಟಕದಿಂದ ವಾರ್ಷಿಕ ಒಟ್ಟು 3500 ಟನ್ ನಷ್ಟು ಜರ್ಮನ್, ಶ್ರೀಲಂಕಾ, ಅಮೆರಿಕಾಕ್ಕೆ ನೇರವಾಗಿ ಅಡಿಕೆ ಎಲೆಗಳಿಂದ ತಯಾರಾಗಿದ್ದ ತಟ್ಟೆಗಳು ರ‌್ತಾಗುತ್ತಿತ್ತು. ವಿಶ್ವಮಟ್ಟದಲ್ಲಿ ನಾವು ಒಪ್ಪಂದ ಮಾಡಿಕೊಂಡಿದ್ದಕ್ಕೆ ನಿಷೇಧ ಹೇರುವಂತಹ ಸಮಸ್ಯೆ ಎದುರಿಸುತ್ತಿದ್ದೇವೆ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವೈಪಲ್ಯವೂ ಇದೆ ಎಂದು ಆರೋಪಿಸಿದರು.

ಶತಮಾನಗಳಿಂದ ನಮ್ಮ ದೇಶದಲ್ಲಿ ಎಲ್ಲ ಜಾತಿ ಧರ್ಮದವರು ಅಡಿಕೆಯನ್ನು ಬಳಸುತ್ತಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಇದರಿಂದ ಜಾನುವಾರುಗಳಿಗೂ ಅನುಕೂಲವಾಗಿದೆ. ಅಡಿಕೆಯಿಂದಲೇ ರೋಗ ಬರುತ್ತದೆ ಎಂಬುದೇ ದೊಡ್ಡ ಹುನ್ನಾರ. ಅಡಿಕೆಯಿಂದ ತಯಾರಾದ ಗುಟ್ಕಾ ಅಥವಾ ಇತರೆ ಅಪಾಯಕಾರಿ ರಾಸಾಯನಿಕಯುಕ್ತ ಮಿಶ್ರಣದ ಅಡಿಕೆ ತಿನ್ನಬೇಡಿ. ಆದರೆ ಶುದ್ಧ ಅಡಿಕೆ ತಿಂದರೆ ಏನೂ ಆಗುವುದಿಲ್ಲ. ಸಕ್ಕರೆ ಕಾಯಿಲೆ ಇದ್ದರೂ ಅದು ವಾಸಿಯಾಗುತ್ತದೆ ಎಂಬುದನ್ನು ಜನರು ಮರೆಯುತ್ತಿದ್ದಾರೆ. ಏಕಪಕ್ಷೀಯವಾಗಿ ಅಮೆರಿಕಾದಲ್ಲಿ ಅಡಿಕೆ ತಟ್ಟೆ ಬಳಸಬಾರದೆಂದು ಹೇಳಿ ಅವರ ದೇಶದ ಸ್ವಂತ ಉದ್ಯಮಕ್ಕೇನೋ ನಮ್ಮ ದೇಶದ ಅಡಿಕೆ ಉದ್ಯಮಕ್ಕೆ ನಿಷೇಧ ಹೇರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜ್, ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್, ಜನವಾದಿ ಮಹಿಳಾ ಸಂಘಟನೆಯ ದೇವಿ, ಮುಖಂಡರಾದ ಎಂ.ಪುಟ್ಟಮಾದು, ಲಿಂಗರಾಜುಮೂರ್ತಿ, ಪ್ರಭಾ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net