

ಮಂಡ್ಯ: ಪ್ರಸ್ತುತ ದಿನದಲ್ಲಿ ಆಂಗ್ಲ ಎಲ್ಲ ಕ್ಷೇತ್ರದಲ್ಲೂ ಅಗತ್ಯವಾದ ಭಾಷೆಯಾಗಿ ಬೆಳೆದು ನಿಂತಿದೆ. ಆಂಗ್ಲ ಭಾಷೆಯಲ್ಲಿ ಸರಿಯಾಗಿ ಪರಿಣಿತಿ ಗಳಿಸಿದರೆ ಉದ್ಯೋಗ ಪಡೆಯಲು ವಿದ್ಯಾರ್ಥಿಗಳು ಶ್ರಮ ಪಡಬೇಕಾಗಿಲ್ಲ ಎಂದು ಎಎಸ್‌ಬಿಎಂ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಮಹಾದೇವ ಸಲಹೆ ನೀಡಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗವು ರೂಸಾ 2.0 ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಪ್ರಸ್ತುತ ಸಮಾಜದಲ್ಲಿ ಆಂಗ್ಲ ಅಧ್ಯಯನ ಮತ್ತು ಭಾಷಾಂತರದ ಆಯಾಮಗಳು ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ವಿಶ್ವದಾದ್ಯಂತ ಆಂಗ್ಲ ಶಿಕ್ಷಕರಿಗೆ ಬೇಡಿಕೆ ಇದೆ. ಈ ಭಾಷೆ ತಿಳಿದವರು ತಮ್ಮ ಜೀವನವನ್ನು ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು ಎಂಬ ನಂಬಿಕೆ ಇದೆ. ಅದು ಇತ್ತೀಚಿನ ದಿನದಲ್ಲಿ ಸತ್ಯವೂ ಕೂಡ ಆಗಿದೆ. ಭಾರತಕ್ಕೆ ಬಂದಂತಹ ಆಂಗ್ಲರು ಭಾಷೆಯನ್ನು ಕೊಡುಗೆಯಾಗಿ ನೀಡಿದರು. ಇಂದು ಭಾಷೆಯ ಜತೆಗೆ ಪ್ರಪಂಚದ ಜ್ಞಾನ, ಆಚಾರ ವಿಚಾರ, ಸಂಸ್ಕೃತಿಯನ್ನು ತಿಳಿಯಬಹುದಾಗಿದೆ ಎಂದು ತಿಳಿಸಿದರು.
ಪದವಿ ಹಂತದಲ್ಲಿ ಆಂಗ್ಲ ವಿಷಯದಲ್ಲಿ ವಿದ್ಯಾರ್ಥಿಗಳನ್ನು ಅನುತೀರ್ಣಗೊಳಿಸಬಾರದು. ಏಕೆಂದರೆ ಪ್ರತಿ ವಿದ್ಯಾರ್ಥಿಯು ಪ್ರತಿಭಾವಂತನಾಗಿದ್ದು, ಕನ್ನಡದಲ್ಲಿ ನೂರಕ್ಕೆ 90 ಅಂಕ ತೆಗೆದುಕೊಳ್ಳುವ ವಿದ್ಯಾರ್ಥಿ ಆಂಗ್ಲ ಭಾಷೆಯಲ್ಲಿ ಕಡಿಮೆ ಅಂಕ ಪಡೆದು ಅನುರ್ತೀಣನಾಗುತ್ತಾನೆ. ಕಾರಣ ಆಂಗ್ಲ ವಿಷಯ ಅವನ ಮಾತೃಭಾಷೆಯಾಗಿಲ್ಲ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಬಿ.ಎನ್.ಕೀರ್ತಿ ಮಾತನಾಡಿದರು. ಪ್ರಾಂಶುಪಾಲ ಡಾ.ಕೆ.ಗುರುರಾಜಪ್ರಭು, ಐಕ್ಯೂಎಸಿ ಸಂಚಾಲಕಿ ಪ್ರೊ.ಬಿ.ಜಯಲಕ್ಷ್ಮೀ, ರೂಸಾ 2.0 ಸಂಚಾಲಕಿ ಡಾ.ಕೆ.ಎಂ.ಮಂಗಳಮ್ಮ, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ಟಿ.ಆರ್.ದೀಪಕ್, ಸಹಾಯಕ ಪ್ರಾಧ್ಯಾಪಕರಾದ ಕೆ.ಎಂ.ಪ್ರಸನ್ನ ಕುಮಾರ್, ಎಸ್.ನವೀನ್, ಪಿ.ಎನ್.ನಾಗರಾಜಮೂರ್ತಿ, ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ.ರವಿಕಿರಣ್, ಉಪನ್ಯಾಸಕರಾದ ಎಂ.ಸಿ.ಸುರೇಶ್, ರಮ್ಯಾ ಹಾಜರಿದ್ದರು.