

ಸೋಮವಾರಪೇಟೆ: ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ಬಾಲಕಿಯರು ಷಟಲ್ ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೂರ್ನಾಡು ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಅಲ್ಲಿನ ಕೊಡವಸಮಾಜ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್‌ನಲ್ಲಿ ಮಡಿಕೇರಿ ತಂಡವನ್ನು ಸೋಲಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ರೋಚಕ ಸೆಮಿಫೈನಲ್‌ನಲ್ಲಿ ವಿರಾಜಪೇಟೆ ತಾಲೂಕು ತಂಡದ ವಿರುದ್ಧ ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿದೆ.
ತಂಡದ ಧನ್ಯ ಯಡೂರು, ಪುಷ್ಪಾಂಜಲಿ ಯಡೂರು ಡಬಲ್ಸ್‌ನಲ್ಲಿ ಮಿಂಚಿದರೆ, ಜೀವಿತ ಹಿರಿಕರ ಸಿಂಗಲ್ಸ್‌ನಲ್ಲಿ ಯಶ ಸಾಧಿಸಿದರು. ಕಾಲೇಜು ಪ್ರಾಂಶುಪಾಲರಾದ ಮಿಲ್‌ಡ್ರೆಡ್ ಗೋನ್ಸಾಲ್ವೆಸ್, ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ ತರಬೇತಿ ನೀಡಿದ್ದರು. ಮುರ್ನಾಡು ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಪಂದ್ಯದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ವಿಜೇತ ತಂಡ ಅ.15 ಮತ್ತು 16ರಂದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಕೊಡಗು ತಂಡವನ್ನು ಪ್ರತಿನಿಧಿಸಲಿದ್ದಾರೆ.