ಸಮಾಜಮುಖಿ ವ್ಯಕ್ತಿ ಸಿಗುವುದೇ ಅಪರೂಪ: ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಹೇಳಿಕೆ

1 (2)
Published on

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಸಮಾಜಮುಖಿ ವ್ಯಕ್ತಿಗಳು ಸಿಗುವುದು ಅಪರೂಪವಾಗುತ್ತಿದೆ ಎಂದು ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಹೇಳಿದರು.

ನಗರದ ಗಾಂಧಿಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ಆಯೋಜಿಸಿದ್ದ ಕವನ ಸಂಕಲನ ಬಿಡುಗಡೆ, 29ನೇ ವರ್ಷ ರಾಜ್ಯಮಟ್ಟದ ಕವಿ-ಕಾವ್ಯಮೇಳ, ವಿವಿಧ ಕ್ಷೇತ್ರದ ಗಣ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತಿಗಳು ತಮ್ಮ ಬರಹದಲ್ಲಿ ಸಮಾಜಪರ ದುಡಿಯುವ ಸಮಾಮುಖಿಯಾಗಿ ನಿಲ್ಲುವ ವ್ಯಕ್ತಿಗಳ ಚಿತ್ರಣವನ್ನು ಕಟ್ಟಿಕೊಡಬೇಕಿದೆ. ಬರಹದಲ್ಲಿ ದಾಖಲಾದರೆ, ಮುಂದಿನ ಪೀಳಿಗೆಗೆ ಅನುಕೂಲವಾಗಲಿವೆ. ಕಾಲಚಕ್ರದಲ್ಲಿ ನಡೆಯುವ ಸಾಧಕರ ಜೀವನ ದಾಖಲಾಗಬೇಕಿದೆ ಎಂದು ನುಡಿದರು.

ಸಮಾಜಮುಖಿ ಬರವಣಿಗೆ ಮೂಲಕ ಉತ್ತಮ ಸಾಹಿತಿ, ಲೇಖಕ, ಬರಹಗಾರರು ಹೊರಹೊಮ್ಮಬೇಕಿದೆ. ಐದು ರೂಪಾಯಿ ವೈದ್ಯ ಡಾ.ಶಂಕರೇಗೌಡ ಅವರ ಜೀವನ ಚರಿತ್ರೆ, ಅವರ ಬಗ್ಗೆ ಕವಿತೆ ಕವನಗಳು, ಲಾವಣಿಗಳು ರಚನೆಯಾಗಬೇಕಿದೆ. ಮುಂದಿನ ಪೀಳಿಗೆಗೆ ಹಾಡುಗಳ ರೂಪದಲ್ಲಿ ಬಂದರೆ ಸದಾ ಸ್ಮರಿಸಿಕೊಳ್ಳುವಂತಾಗುತ್ತದೆ. ಜಿಲ್ಲೆಯಲ್ಲಿನ ಶೈಕ್ಷಣಿಕ ಪ್ರಗತಿ, ಅಭಿವೃದ್ದಿಯ ಕುಂಠಿತಗಳ ಬಗ್ಗೆ ಅರಿವು ಮೂಡಿಸುವ, ರಾಜಕಾರಣಿಗಳನ್ನು ಎಚ್ಚರಿಸುವ ಗೀತೆಗಳು ಲೋಕಮಾನ್ಯಗೊಂಡಾಗ ಒಂದಷ್ಟು ಕಾರ್ಯಗಳು ರೂಪುಗೊಳ್ಳುತ್ತವೆ. ಬರವಣಿಗೆಯಿಂದ ಎಲ್ಲವನ್ನು ದಾಖಲಿಸಿ ಎಚ್ಚರಿಸುವ ಕಾರ್ಯ ಸಾಗಬೇಕಿದೆ ಎಂದು ಅಭಿಪ್ರಾಯಿಸಿದರು.

ಸಮ್ಮೇಳಾಧ್ಯಕ್ಷೆ ಸಾಹಿತಿ ಡಾ.ರತ್ನ ಗಿ.ಬದಿ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ವಕೀಲ ಗುರುಪ್ರಸಾದ್, ಪ್ರಾಧ್ಯಾಪಕ ಜಯಕುಮಾರ್, ಕವಿಗೋಷ್ಠಿ ಅಧ್ಯಕ್ಷೆ ಲೇಖಕಿ ಗೀತಾ ಕೈಲ್ಕೆರೆ, ಸಾಹಿತಿ ಡಾ.ಕನ್ನಿಕಾ, ವೈದ್ಯರಾದ ಡಾ.ಮನೋಹರ್, ಡಾ.ಕೆ.ಚಂದ್ರಶೇಖರ್, ಡಾ.ಎಚ್.ಸಿ.ಆನಂದ್, ಸಹಕಾರಿ ರತ್ನ ಕೀಲಾರ ಕೃಷ್ಣ, ಕಸಾಪ ನಗರಾಧ್ಯಕ್ಷೆ ಸುಜಾತಾಕೃಷ್ಣ, ವೇದಿಕೆ ಅಧ್ಯಕ್ಷ ಪೋತೇರ ಮಹದೇವು ಇತರರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ವೈದ್ಯರತ್ನ, ಕರ್ನಾಟಕ ಕಸ್ತೂರಿ ಸಾಹಿತ್ಯ ವಿಕಾಸರತ್ನ, ಕರ್ನಾಟಕ ಕಸ್ತೂರಿ ಕಾವ್ಯಸಿರಿ, ಕರ್ನಾಟಕ ಕಸ್ತೂರಿ ಕಲಾ ವಿಕಾಸರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿಗಳು ಸ್ವರಚಿತ ಕವಿತೆ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net