

ಮಂಡ್ಯ: ಸಾಧನೆ ಮಾಡಲು ಪರಿಶ್ರಮದ ಜತೆಗೆ ಸರಿಯಾದ ಗುರಿ ಮತ್ತು ಗುರುವಿನ ಮಾರ್ಗದರ್ಶನ ಅತ್ಯವಶ್ಯಕ ಎಂದು ಅಂತಾರಾಷ್ಟ್ರೀಯ ಪ್ಯಾರಾ ಈಜುಪಟು ಪುನೀತ್‌ನಂದಕುಮಾರ್ ಅಭಿಪ್ರಾಯಪಟ್ಟರು.
ನಗರದ ಪಿಇಟಿ ಈಜುಕೇಂದ್ರದಲ್ಲಿ ಜನತಾ ಶಿಕ್ಷಣ ಟ್ರಸ್ಟ್, ಪಿಇಟಿ ಈಜುಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪಿಇಟಿ ನಾನ್ ಮೆಡಲಿಸ್ಟ್ ಈಜು ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಈಜು ಸ್ಪರ್ಧೆ ಅತ್ಯುತ್ತಮವಾದ ಕ್ರೀಡಾ ಕ್ಷೇತ್ರ. ಉತ್ತಮ ತರಬೇತಿ ಮತ್ತು ಸಾಧನೆ ಮಾಡುವ ಗುರಿಯೊಂದಿಗೆ ಶ್ರಮಪಟ್ಟರೆ ಯಶಸ್ಸು ಸಾಧ್ಯವಿದೆ ಎಂದರು.
ನನ್ನ ಈಜು ಕ್ರೀಡಾಸಾಧನೆಗೆ ನನ್ನ ತಂದೆ, ತಾಯಿ ಪ್ರೋತ್ಸಾಹ ಮತ್ತು ಗುರುಗಳ ತರಬೇತಿಯ ಮಾರ್ಗದರ್ಶನ ಶಕ್ತಿಯಾಗಿ ಪ್ರೇರಣೆಯಾಯಿತು. ಜತೆಗೆ ಪರಿಶ್ರಮ ಪಟ್ಟಿದ್ದೇನೆ. ಸೋತೆ, ಗೆದ್ದೆ ಎನ್ನುವುದನ್ನು ಬಿಟ್ಟು ಕ್ರೀಡಾಮನೋಭಾವದಿಂದ ಸಾಧನೆ ಮಾಡುವ ಹಂಬಲ ಹೆಚ್ಚಾಗಿ ಶತತ ಪ್ರಯತ್ನದಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಯಶಸ್ಸು ಪಡೆದುಕೊಂಡೆ ಎಂದರು.
ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, ಮನಸ್ಸಿಟ್ಟು ಯಾವುದೇ ಕಾರ್ಯ ಮಾಡಿದರೂ ಯಶಸ್ಸು ಸಾಧ್ಯವಾಗುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಮನಸ್ಸಿಟ್ಟು ಕಾರ್ಯ ಸಾಧನೆಗೆ ಪ್ರೇರಣೆ ನೀಡಬೇಕು. ಪಿಇಟಿ ಈಜುಕೇಂದ್ರದಲ್ಲಿ ಸ್ಪರ್ಧೆಗಳು ಯಶಸ್ವಿಯಾಗಿ ನಡೆಯಲಿ, ಕ್ರೀಡಾಪಟುಗಳ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದರು.
ಪಿಇಟಿ ಉಪಾಧ್ಯಕ್ಷ ಬಸವಯ್ಯ, ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ, ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ನಿರ್ದೇಶಕ ಡಾ.ರಾಮಲಿಂಗಯ್ಯ, ಈಜುಕೇಂದ್ರದ ಆಡಳಿತಾಧಿಕಾರಿ ಡಾ.ಚಂದ್ರಶೇಖರ್, ಕ್ರೀಡಾಸಮುಚ್ಚಯದ ವ್ಯವಸ್ಥಾಪಕ ಕಾರ್ತಿಕ್, ತರಬೇತುದಾರ ಗಿರೀಶ್‌ಕುಮಾರ್ ಇತರರಿದ್ದರು. ಇದೇ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯ ಕ್ರೀಡಾ ಸಾಧಕರನ್ನು ಅಭಿನಂದಿಸಲಾಯಿತು.