

ಚನ್ನರಾಯಪಟ್ಟಣ: ಹಳ್ಳಿಕಾರ್ ರಾಸುಗಳನ್ನು ಸಾಕಲು ಉತ್ತೇಜನ ನೀಡುವ ಉದ್ದೇಶದಿಂದ ನಮ್ಮ ಭಾಗದ ರೈತರಿಗೆ ಪ್ರಥಮ ವರ್ಷದ ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಶ್ರೀ ಗನ್ನಿ ಬಸವೇಶ್ವರ ಯುವಕರ ಸಂಘದ ಸಂಚಾಲಕ ಕಾಂತರಾಜು ತಿಳಿಸಿದರು.
ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಮಾ.15 ಮತ್ತು 16 ರಂದು ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಎರಡು ವಿಭಾಗದಲ್ಲಿ ಆಯೋಜಿಸಲಾಗಿದೆ. ಮಾ.15ರಂದು ಹಾಲು ಹಲ್ಲಿನ ಕರು ಜೊತೆಗೆ 2 ಹಲ್ಲಿನ ಕರುಗಳ ಚಕ್ಕಡಿ ಜೋಡಿ ಗಾಡಿ ಸ್ಪರ್ಧೆ ನಡೆಯಲಿದ್ದು, ಪ್ರಥಮ ಬಹುಮಾನವಾಗಿ ಹೀರೋ ಎಚ್‌ಎಫ್ 100 ದ್ವಿಚಕ್ರ ವಾಹನ, ದ್ವಿತೀಯ ಬಹುಮಾನ 30,000 ನಗದು, ತೃತೀಯ ಬಹುಮಾನ 20,000 ನಗದು, ನಾಲ್ಕನೇ ಬಹುಮಾನ 10 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಪ್ರವೇಶ ಶುಲ್ಕ 3 ಸಾವಿರ ರೂ. ನಿಗದಿಪಡಿಸಲಾಗಿದೆ. ಸ್ಪರ್ಧೆಯು 160 ಮೀ. ಗೆ ಸೀಮಿತವಾಗಿರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಾ.16ರಂದು ಗೂಳಿ, ಕಸಿ, ಜೋಡಿ ಗಾಡಿ ಓಟದ ಸ್ಪರ್ಧೆ ನಡೆಯಲಿದೆ. ಒಂದು ಗೂಳಿ ಜೊತೆಗೆ ಕಸಿ, ಒಂದು ಕಿಲಾರಿ ಜೊತೆ ಕಸಿ ಹಾಗೂ ಎರಡು ಹಳ್ಳಿಕಾರ್ ಎತ್ತುಗಳಿಗೆ ಅವಕಾಶವಿದ್ದು, 180 ಮೀಟರ್‌ಗೆ ಸೀಮಿತವಾಗಿದೆ. ಪ್ರವೇಶ ಶುಲ್ಕ 3,500 ರೂ. ನಿಗದಿಪಡಿಸಿದೆ. ಪ್ರಥಮ ಬಹುಮಾನವಾಗಿ ಹೀರೋ ಫ್ಯಾಶನ್ ಪ್ರೊ ದ್ವಿಚಕ್ರ ವಾಹನ, ದ್ವಿತೀಯ ಬಹುಮಾನ 40 ಸಾವಿರ ರೂ. ನಗದು ತೃತಿಯ ಬಹುಮಾನ 30 ಸಾವಿರ ರೂ. ನಗದು, ನಾಲ್ಕನೇ ಬಹುಮಾನ 20 ಸಾವಿರ ರೂ. ನಗದು ಆಕರ್ಷಕ ಟ್ರೋಫಿ ಒಳಗೊಂಡಿರುತ್ತದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಕತ್ತರಿಘಟ್ಟ ಮಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ್ ಗುರೂಜಿ ವಹಿಸಲಿದ್ದು, ಶಾಸಕ ಸಿ.ಎನ್. ಬಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಸೇರಿದಂತೆ ರಾಜಕೀಯ ಮುಖಂಡರು ಹಾಗೂ ಚಲನಚಿತ್ರ ನಟರಾದ ಶ್ರೀನಗರ ಕಿಟ್ಟಿ, ಅದಿತ್ಯ, ನಿರ್ಮಾಪಕ ಸಿಲ್ಕ್ ಮಂಜು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತಾಲೂಕಿನ ಹಳ್ಳಿಕಾರ್ ಪೋಷಕ ಸಂದೀಪ್ ಹಿರಿಸಾವೆ ಅವರಿಗೆ ಹಳ್ಳಿಕಾರ್ ಪೋಷಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು. ಸ್ಪರ್ಧೆಗೆ ಚಿಕ್ಕಮಗಳೂರು, ದಾವಣಗೆರೆ, ತುಮಕೂರು, ಬಳ್ಳಾರಿ, ಬೆಳಗಾವಿ, ಕೊಪ್ಪಳ, ರಾಯಚೂರು, ರಾಮನಗರ, ಮಂಡ್ಯ ಹಾಗೂ ಚಿತ್ರದುರ್ಗ ಹಾಗೂ ಹೊರ ರಾಜ್ಯಗಳ ಗೂಳಿಗಳು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಜೋಡಿ ಭಾಗವಹಿಸುವ ನಿರೀಕ್ಷೆ ಇದೆ. ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಆಸ್ಪತ್ರೆಯಿಂದ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ಠಾಣೆಯಿಂದ ಅಗ್ನಿಶಾಮಕ ವಾಹನ ಹಾಗೂ ಬಂದೋಬಸ್ತ್ ಸಿಆರ್‌ಪಿಎಫ್ ಪಡೆಗೆ ಮನವಿ ಮಾಡಲಾಗಿದ್ದು, ಸುತ್ತಮುತ್ತಲ 12 ಗ್ರಾಮಗಳ ಗ್ರಾಮಸ್ಥರು ಹಾಗೂ ಶ್ರೀ ಗನ್ನಿ ಬಸವೇಶ್ವರ ಯುವಕರ ಸಂಘದ 50 ಯುವಕರ ಪಡೆ ಉಸ್ತುವಾರಿ ನೋಡಿಕೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ಸತೀಶ್, ನವೀನ್ ಇದ್ದರು.