ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲತೆಗೆ ಒತ್ತು: ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಅಭಿಮತ

1 (4)
Published on

ಮಂಡ್ಯ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೃಜನಾತ್ಮಕ ಕಲೆ ಮತ್ತು ಕೌಶಲತೆಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ನಗರದ ಗಾಂಧಿಭವನದಲ್ಲಿ ಕಲಾತಪಸ್ವಿ ಆರ್ಟ್ ಸಂಸ್ಥೆ, ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್ ಸಹಯೋಗದಲ್ಲಿ ದೇವಮ್ಮ ಚಿಕ್ಕಮರಿಗೌಡರ ಸ್ಮರಣಾರ್ಥ ಆಯೋಜಿಸಿದ್ದ 7ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಮತ್ತು ವೇಷಭೂಷಣ ಸ್ಪರ್ಧೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಹಂತದಲ್ಲಿಯೇ ಕೌಶಲತೆ ಹೆಚ್ಚಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೊಸ ಆಯಾಮವನ್ನು ರೂಪಿಸಲಾಗಿದೆ. ಪ್ರತಿಭಾವಂತರನ್ನಾಗಿ ರೂಪಿಸುವ ಶಿಕ್ಷಣ ನೀತಿ ಹೊಸ ಬದಲಾವಣೆಯನ್ನು ತರಲಿದೆ. ಇದರ ಪ್ರತಿಫಲ ಇನ್ನು 10-15 ವರ್ಷಗಳಲ್ಲಿ ಹೊರಬೀಳಲಿದೆ ಎಂದು ನುಡಿದರು.

ಬ್ರಿಟಿಷ್ ಸರ್ಕಾರದ ಮೆಕಾಲೆ ನೀಡಿದ ಶಿಕ್ಷಣ ವ್ಯವಸ್ಥೆಯಲ್ಲೇ ಭಾರತ ಸಾಗುತ್ತಿತ್ತು. ಇನ್ನು ಮುಂದೆ ನೂತನ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಮನ್ವಂತರಗಳು ಸೃಷ್ಠಿಯಾಗಲಿವೆ. ಉದ್ಯೋಗ, ಉದ್ಯಮಗಳು, ಕ್ರೀಡಾಪಟುಗಳು, ಕೌಶಲಜ್ಞಾನಿಗಳು, ವಿಜ್ಞಾನಿಗಳು ರೂಪುಗೊಳ್ಳಲಿದ್ದಾರೆ ಎಂದು ಹೇಳಿದರು.

ಕಳೆದ 15 ವರ್ಷದಿಂದ ಮಂಡ್ಯದಲ್ಲಿ ಕಲಾತಪಸ್ವಿ ಟ್ರಸ್ಟ್ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ದೇಶಭಕ್ತಿ, ವೀರಸೈನಿಕರಿಗೆ ನಮನ, ಪರಿಸರ, ಸೃಜನಾತ್ಮಕ ಕಲೆಗಳ ಸ್ಪರ್ಧೆ, ವೇಷಭೂಷಣ ಹೀಗೆ ಹತ್ತಾರು ಕಾರ್ಯಗಳನ್ನು ಸಮಾಜಮುಖಿಯಾಗಿ ನಿರಂತರವಾಗಿ ಮಾಡುತ್ತ ಬರುತ್ತಿದೆ, ಈಗ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೂ ವಿಸ್ತಾರಗೊಳ್ಳಲು ಮುನ್ನಡೆಯಿಟ್ಟಿದೆ ಎಂದು ಹೇಳಿದರು.

ಕಲಾತಪಸ್ವಿ ಆರ್ಟ್ ಸಂಸ್ಥೆಯ ಕಾರ್ಯದರ್ಶಿ ಕಲಾವಿದ ಅನಿಲ್‌ಕುಮಾರ್, ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್‌ನ ಉಪಾಧ್ಯಕ್ಷ ಲೋಹಿತ್, ಸಹಶಿಕ್ಷಕಿ ಹಿಮಾಶ್ರೀ ಇತರರಿದ್ದರು.

ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳ ವಿಭಾಗದಲ್ಲಿ ವಚನ್(ಪ್ರ), ಮೈತ್ರಿ(ದ್ವಿ), ದೈವಿಕ್(ತೃ), ಪ್ರಾಥಮಿಕ ವಿಭಾಗದಲ್ಲಿ ಮೋಹನ್‌ಬಾಬು(ಪ್ರ), ವಿಷ್ಣುಪ್ರಸಾದ್(ದ್ವಿ), ಯಶಿಕಾ(ತೃ), ಪ್ರೌಢಶಾಲಾ ವಿಭಾಗದಲ್ಲಿ ತುಷಾರ್(ಪ್ರ), ಗಾನವಿ(ದ್ವಿ), ಜೀವಿತಾ(ತೃ) ಹಾಗೂ ವೇಷಭೂಷಣ ಸ್ಪರ್ಧೆಯಲ್ಲಿ ಸುಹನ್ವಿ(ಪ್ರ), ಮೌಲ್ಯ(ದ್ವಿ), ಧನ್ವಿತಾ(ತೃ) ಬಹುಮಾನ ಪಡೆದುಕೊಂಡರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net