ಒತ್ತಡದ ಬದುಕಿಗೆ ವಿರಾಮ ಬಹುಮುಖ್ಯ: ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್.ವಿಶಾಲ್‌ರಘು ಸಲಹೆ

State Level Lawyers Sports Mandya
Published on

ಮಂಡ್ಯ: ಒತ್ತಡದ ಬದುಕಿಗೆ ಒಂದಷ್ಟು ವಿರಾಮ ಬಹುಮುಖ್ಯವಾಗಿದೆ. ಇದಕ್ಕೆ ವಕೀಲರೂ ಹೊರತಾಗಿಲ್ಲ. ಹಾಗಾಗಿ ಎಲ್ಲರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್.ವಿಶಾಲ್‌ರಘು ಕಿವಿಮಾತು ಹೇಳಿದರು.

ನಗರದ ವಕೀಲರ ಸಂಘದ ಆವರಣದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಆಯೋಜಿಸಿದ್ದ ರಾಜ್ಯಮಟ್ಟದ ವಕೀಲರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸದಾ ಒತ್ತಡದ ಬದುಕಿನಲ್ಲಿ ಕೆಲಸ ಮಾಡುವ ವಕೀಲರಿಗೆ ಕ್ರೀಡಾಕೂಟ ಅತ್ಯಂತ ಅವಶ್ಯಕ ಎಂದರು.

ಎಲ್ಲೂ ಸಲ್ಲದವರು ವಕೀಲ ವೃತ್ತಿಗೆ ಬರುತ್ತಾರೆ ಎಂಬ ಮಾತು ಇತ್ತು. ಆದರೆ ಇಂದು ಕಾನೂನು ಪದವಿ ಪಡೆದ ವ್ಯಕ್ತಿ ವಿಶ್ವದ ಯಾವುದೇ ದೇಶದಲ್ಲಾದರೂ ಬದುಕುವಂತಹ ವಾತಾವರಣ ನಿರ್ಮಾಣವಾಗಿದೆ. ವಕೀಲರ ಪರಿಷತ್‌ನಲ್ಲಿ ಹೆಚ್ಚು ಜನರು ನೋಂದಣಿಗೆ ಬರುತ್ತಿದ್ದಾರೆ. ಮೊದಲೆಲ್ಲ ತಿಂಗಳಿಗೆ ಒಮ್ಮೆ ಮಾಡಿಕೊಳ್ಳಲಾಗುತ್ತಿತ್ತು. ಈಗ ಮೊದಲ ಮತ್ತು ಕಡೆಯ ಶನಿವಾರ ಎರಡು ದಿನಗಳಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜೆ.ರಮಾ ಮಾತನಾಡಿ, ಕ್ರೀಡೆಯಿಂದ ದೇಹ ಮತ್ತು ಮನಸ್ಸು ಉಲ್ಲಾಸವಾಗುತ್ತದೆ. ನಿಯಮಿತವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮಗೊಳ್ಳಲಿದೆ. ಕ್ರೀಡೆಯಲ್ಲಿ ಸ್ಪರ್ಧಾ ಮನೋಭಾವ ಅಗತ್ಯ. ಎಲ್ಲವೂ ಆರೋಗ್ಯಕರ ಪೈಪೋಟಿ ಇದ್ದಾಗ ಮಾತ್ರ ಯಾವುದೇ ಅಡೆ ತಡೆಗಳಿಲ್ಲದೆ ಚೆನ್ನಾಗಿ ನಡೆಯುತ್ತದೆ. ಈ ನಿಟ್ಟಿನಲ್ಲಿ ವಕೀಲರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ನೆನಪನ್ನು ಕೊಂಡೊಯ್ಯುವಂತೆ ಸಲಹೆ ನೀಡಿದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ.ರಾಜೇಂದ್ರ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ್, ಹೈಕೋರ್ಟ್ ಹಿರಿಯ ವಕೀಲ ಆರ್.ಎಸ್. ರವಿ, ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಜಿ ರವಿ, ಹೈಕೋರ್ಟ್ ವಕೀಲ ಅನಿಲ್‌ಕುಮಾರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಡಿ.ಎಂ.ಮಹೇಶ್, ಜಂಟಿ ಕಾರ್ಯದರ್ಶಿ ಎನ್.ಎಂ.ಮಹದೇವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net