ಅಕ್ಟೋಬರ್ 26, 27ರಂದು ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ

Published on

ಮೈಸೂರು: ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ)ನ 4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನವನ್ನು ಅ.26 ಮತ್ತು 27ರಂದು ನಗರದ ಪುರಭವನ ಆವರಣದಲ್ಲಿ ಆಯೋಜಿಸಲಾಗಿದೆ.
26ರಂದು ಬೆಳಗ್ಗೆ 11 ಗಂಟೆಗೆ ನಂಜರಾಜ ಬಹದ್ದೂರ್ ಛತ್ರದಿಂದ ಪುರಭವನದವರೆಗೆ ಕಾರ್ಮಿಕರ ಬೃಹತ್ ಮೆರವಣಿಗೆ ಆಯೋಜಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ವೇದಿಕೆ ಕಾರ್ಯಕ್ರಮವನ್ನು ಎಐಯುಟಿಯುಸಿ ಅಖಿಲ ಭಾರತ ಅಧ್ಯಕ್ಷ ಕೆ.ರಾಧಾಕೃಷ್ಣ ಉದ್ಘಾಟಿಸುವರು. ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಶಂಕರ್‌ದಾಸ್ ಗುಪ್ತ ಮುಖ್ಯ ಭಾಷಣ ಮಾಡುವರು. ರಾಜ್ಯ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ಮೇಟಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ ಎಂದು ಎಐಯುಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ ಕೆ.ಸೋಮಶೇಖರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಉಗ್ರ ನರಸಿಂಹೇಗೌಡ ಸ್ವಾಗತಿಸುವರು. ಸೂಕ್ತಿ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ನಿವೃತ್ತ ಪ್ರಾಧ್ಯಾಪಕ ಹಾಗೂ ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಕಾಳಚನ್ನೇಗೌಡ ಉದ್ಘಾಟಿಸುವರು. ಸಂಜೆ 5ಕ್ಕೆ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಪ್ರತಿನಿಧಿ ಅಧಿವೇಶನ ನಡೆಯಲಿದ್ದು, ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಉಮಾ ಭಾಷಣ ಮಾಡಲಿದ್ದಾರೆ. ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಮುಖಂಡರು ಪ್ರತಿನಿಧಿ ಅಧಿವೇಶನದಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು.
ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕೈಗಾರಿಕಾ ಕಾರ್ಮಿಕರು, ವೈದ್ಯಕೀಯ ಕಾಲೇಜು, ಸರ್ಕಾರಿ ಹಾಸ್ಟೆಲ್, ವಿವಿ ಹಾಗೂ ಇತರ ಕ್ಷೇತ್ರಗಳ ಗುತ್ತಿಗೆ ಕಾರ್ಮಿಕರು, ಗಣಿ ಕಾರ್ಮಿಕರು, ವಿದ್ಯುತ್ ಕ್ಷೇತ್ರದ ನೌಕರರು, ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ನೌಕರರು, ಕಟ್ಟಡ ಕಾರ್ಮಿಕರು ಇತರ ಕ್ಷೇತ್ರದ ಕಾರ್ಮಿಕರು ಬಹಿರಂಗ ಹಾಗೂ ಪ್ರತಿನಿಧಿ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಕಾಳಚನ್ನೇಗೌಡ, ಅಧ್ಯಕ್ಷ ಉಗ್ರ ನರಸಿಂಹೇಗೌಡ, ರಾಜ್ಯ ಸದಸ್ಯ ಕಾರ್ಯದರ್ಶಿ ಎಂ.ಉಮಾದೇವಿ, ಜಿಲ್ಲಾಧ್ಯಕ್ಷ ವಿ.ಯಶೋಧರ್, ಕಾರ್ಯದರ್ಶಿ ಚಂದ್ರಶೇಖರ ಮೇಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net