ಮೈಸೂರಿನಲ್ಲಿ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ

VJP AIUTUC PRESS MEET
ವಿಜಯಪುರದ ಎಐಯುಟಿಯುಸಿ ಕಚೇರಿಯಲ್ಲಿ 4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಮಲ್ಲಿಕಾರ್ಜುನ ಎಚ್.ಟಿ, ಭರತ್‌ಕುಮಾರ್, ಕಾಶಿಬಾಯಿ ಜನಗೊಂಡ ಮತ್ತಿತರರಿದ್ದಾರೆ.
Published on

ವಿಜಯಪುರ: ಮೈಸೂರಿನಲ್ಲಿ ಅ. 26 ಮತ್ತು 27 ರಂದು ಎಐಯುಟಿಯುಸಿ ಸಂಘಟಿತ 4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಎಲ್ಲ ಕಾರ್ಮಿಕರು ಭಾಗವಹಿಸುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ ಹೇಳಿದರು.

ಬಂಡವಾಳಶಾಹಿ ವರ್ಗದ ಕ್ರೂರ ಶೋಷಣೆಯ ವಿರುದ್ಧ ಕಾರ್ಮಿಕ ಹೋರಾಟವನ್ನು ಬಲಪಡಿಸಲು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರಬಲ ಕಾರ್ಮಿಕ ಚಳವಳಿ ಬೆಳೆಸಲು ಈ ಸಮ್ಮೇಳನ ಆಯೋಜಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಅ. 26ರಂದು ಬೆಳಗ್ಗೆ 11ಕ್ಕೆ ಮೈಸೂರಿನ ನಂಜರಾಜ ಅರಸ್ ಛತ್ರದಿಂದ ಟೌನ್ ಹಾಲ್ ಪ್ರಾಂಗಣದವರೆಗೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಟೌನ್ ಹಾಲ್ ಮೈದಾನದಲ್ಲಿ ಬಹಿರಂಗ ಅಧಿವೇಶನ ನಡೆಯಲಿದೆ. ಎಐಯುಟಿಯುಸಿ ಅಖಿಲ ಭಾರತ ಅಧ್ಯಕ್ಷ ಕಾ.ಕೆ.ರಾಧಾಕೃಷ್ಣ ಉದ್ಘಾಟನೆ ನೆರವೇರಿಸಲಿದ್ದಾರೆ. ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕಾ.ಶಂಕರ್‌ದಾಸ್ ಗುಪ್ತ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ರಾಜ್ಯ ಅಧ್ಯಕ್ಷ ಕಾ.ಕೆ.ಸೋಮಶೇಖರ್ ಭಾಷಣ ಮಾಡುವರು. ರಾಜ್ಯ ಕಾರ್ಯದರ್ಶಿ ಕಾ.ಕೆ.ಸೋಮಶೇಖರ್ ಯಾದಗಿರಿ ಅಧ್ಯಕ್ಷತೆ ವಹಿಸುವರು. ರಾಜ್ಯ ಸೆಕ್ರಟೇರಿಯಟ್ ಸದಸ್ಯ ಕಾ.ಚಂದ್ರಶೇಖರ್ ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಉಗ್ರನರಸಿಂಹೇಗೌಡ ಸ್ವಾಗತಿಸುವರು, ಪ್ರೊ.ಕಾಳಚನ್ನೇಗೌಡರು ಸೂಕ್ತಿ ಹಾಗೂ ಛಾಯಚಿತ್ರ ಪ್ರದರ್ಶನ ಉದ್ಘಾಟಿಸುವರೆಂದು ತಿಳಿಸಿದರು.

ಅದೇ ದಿನ ಸಂಜೆ 5ಕ್ಕೆ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಪ್ರತಿನಿಧಿ ಅಧಿವೇಶನವು ನಡೆಯಲಿದ್ದು, ಎಸ್‌ಯುಸಿಐ (ಸಿ) ರಾಜ್ಯ ಕಾರ್ಯದರ್ಶಿ ಕಾ.ಕೆ.ಉಮಾ ಮುಖ್ಯ ಅತಿಥಿಗಳಾಗಿ ಮಾತನಾಡಲಿದ್ದಾರೆ. ಎರಡನೇ ದಿನವೂ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಕಾರ್ಮಿಕರ ಹಿತರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಚರ್ಚೆಗಳನ್ನು ನಡೆಸಿ ನಿರ್ಧಾರಗಳನ್ನು ಕೈಗೊಳ್ಳಲಾಗುವುದೆಂದರು.
ಸಮ್ಮೇಳನದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಸಂಘಟನಾಕಾರ ಭರತ್‌ಕುಮಾರ್, ಕಾಶಿಬಾಯಿ ಜನಗೊಂಡ, ಮಹಾದೇವಿ ಧರ್ಮಶೆಟ್ಟಿ, ಭಾರತಿ ದೇವಕತೆ , ನಿರ್ಮಲಾ ಬೀರನುರ, ಅಂಬಿಕಾ ಒಳಸಂಗ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net