ವಿಜಯಪುರದಲ್ಲಿ ನ.9, 10 ರಂದು ರಾಜ್ಯಮಟ್ಟದ ಖೋಖೋ ಪಂದ್ಯಾವಳಿ

hn 7-2
ವಿಜಯಪುರ ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್.ಎಸ್. ಪಿಯು ಕಾಲೇಜಿನ ಆಡಳಿತಾಧಿಕಾರಿ ಐ.ಎಸ್.ಕಾಳಪ್ಪನವರ ಮಾತನಾಡಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎನ್.ಬಗಲಿ, ಎಸ್.ಎಸ್.ಕೋರಿ, ಆರ್.ಬಿ.ಕೊಟ್ನಾಳ ಮತ್ತಿತರರಿದ್ದರು.
Published on

ವಿಜಯಪುರ : ಇದೇ ಮೊದಲ ಬಾರಿಗೆ ವಿಜಯಪುರ ನಗರದಲ್ಲಿ ರಾಜ್ಯಮಟ್ಟದ ಬಾಲಕ ಮತ್ತು ಬಾಲಕಿಯರ ಖೋ ಖೋ ಪಂದ್ಯಾವಳಿ ನ.9 ಹಾಗೂ 10 ರಂದು ಬಿಎಲ್‌ಡಿಇ ಸಂಸ್ಥೆ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಎಸ್.ಎಸ್. ಪಿಯು ಕಾಲೇಜಿನ ಆಡಳಿತಾಧಿಕಾರಿ ಐ.ಎಸ್.ಕಾಳಪ್ಪನವರ ತಿಳಿಸಿದರು.

ಎಂ.ಬಿ.ಪಾಟೀಲ ಅವರ ಆಸಕ್ತಿ ಮತ್ತು ಉತ್ಸಾಹದ ಫಲವಾಗಿ ಇದೇ ಮೊದಲ ಬಾರಿಗೆ ವಿಜಯಪುರ ಜಿಲ್ಲೆಯಲ್ಲಿ ಖೋಖೋ ಪಂದ್ಯಾವಳಿ ನಡೆಸಲಾಗುತ್ತಿದೆ. ನ.9 ರಂದು ನಡೆಯಲಿರುವ ಉದ್ಘಾಟನೆ ಸಮಾರಂಭದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್.ಪಾಟೀಲ ನಡಹಳ್ಳಿ, ಎಂ.ಬಿ.ಪಾಟೀಲ, ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಪ್ರಕಾಶ ಹುಕ್ಕೇರಿ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹೊನಲು ಬೆಳಕಿನ ಖೋಖೋ ಪಂದ್ಯಾವಳಿ ಇದಾಗಿದ್ದು, ಕ್ರೀಡಾಕೂಟಕ್ಕಾಗಿ ಆರು ಮೈದಾನಗಳನ್ನು ನಿರ್ಮಿಸಲಾಗಿದೆ. ಈ ಕ್ರೀಡಾಕೂಟದಲ್ಲಿ 32 ಶೈಕ್ಷಣಿಕ ಜಿಲ್ಲೆಗಳಿಂದ 32 ಬಾಲಕ ಮತ್ತು 32 ಬಾಲಕಿಯರ ತಂಡಗಳ 863 ಕ್ರೀಡಾಪಟುಗಳು ಹಾಗೂ 80 ತರಬೇತಿದಾರರು ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ. ಕ್ರೀಡಾಪಟುಗಳು ಮತ್ತು ಸಿಬ್ಬಂದಿಗಾಗಿ ಬಿ.ಎಲ್.ಡಿ.ಇ. ಸಂಸ್ಥೆಯ ವತಿಯಿಂದ ಮೂರು ದಿನಗಳ ಕಾಲ ವಿಜಯಪುರ ಶೈಲಿಯ ರುಚಿಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಕ್ರೀಡಾಕೂಟದ ಯಶಸ್ಸಿಗಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎನ್.ಬಗಲಿ ಮಾತನಾಡಿ, ಈ ಕ್ರೀಡಾಕೂಟಕ್ಕಾಗಿ ಸರ್ಕಾರದಿಂದ 11.75 ಲಕ್ಷ ರೂ. ಅನುದಾನ ಬಂದಿದೆ. ಈ ಹಣವನ್ನು ಕ್ರೀಡಾಪಟುಗಳು ಸಿಬ್ಬಂದಿಯ ಟಿಎ ಮತ್ತು ಡಿಎಗಾಗಿ ವ್ಯಯಿಸಲಾಗುವುದು. ಇನ್ನೂ ಒಂದು ಲಕ್ಷ ರೂ. ಅನುದಾನದ ಅಗತ್ಯವಿದ್ದು ಸರ್ಕಾರದಿಂದ ಈ ಹಣ ಪಡೆಯಲು ಪತ್ರ ಬರೆಯಲಾಗುವುದು ಎಂದರು.

ಬಿಎಲ್ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಆರ್.ಬಿ.ಕೊಟ್ನಾಳ ಮಾತನಾಡಿ, ಕ್ರೀಡಾಕೂಟಕ್ಕೆ ಆಗಮಿಸುವ ಕ್ರೀಡಾಪಟುಗಳು ಮತ್ತು ತರಬೇತಿದಾರರಿಗೆ ವಿಜಯಪುರ ನಗರದ 8 ನಾನಾ ಪಿ.ಯು.ಕಾಲೇಜುಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.ಇವರಿಗಾಗಿ ಫ.ಗು.ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜು, ಎಸ್.ಬಿ. ಆರ್ಟ್ಸ್ ಮತ್ತು ಕೆಸಿಪಿ ಸೈನ್ಸ್ ಕಾಲೇಜು, ಬಿಎಲ್ಡಿಇ ನರ್ಸಿಂಗ್ ಕಾಲೇಜು, ರೂಪಾದೇವಿ ಪಿ.ಯು.ಕಾಲೇಜು, ಚೇತನಾ ಪಿ.ಯು.ಕಾಲೇಜು, ಚೈತನ್ಯಾ ಪಿ.ಯು. ಕಾಲೇಜು, ಎಕ್ಸಲೆಂಟ್ ಪಿ.ಯು.ಕಾಲೇಜು ಮತ್ತು ತುಂಗಳ ಸೈನ್ಸ್ ಪಿಯು ಕಾಲೇಜುಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಿಂದ ಕ್ರೀಡಾಂಗಣಕ್ಕೆ ಆಗಮಿಸಲು ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಬಿಎಲ್‌ಡಿಇ ಸಂಸ್ಥೆಯ ಕ್ರೀಡಾ ನಿರ್ದೇಶಕ ಎಸ್.ಎಸ್.ಕೋರಿ, ಸಹಾಯಕ ನಿರ್ದೇಶಕ ಕೈಲಾಸ ಹಿರೇಮಠ, ಬಿಎಲ್ಡಿಇ ಸಂಸ್ಥೆಯ ಆಡಳಿತಾಧಿಕಾರಿ ಬಿ.ಆರ್.ಪಾಟೀಲ, ಎಸ್.ಎಸ್.ಪಿ.ಯು. ಕಾಲೇಜಿನ ಪ್ರಾಚಾರ್ಯ ಡಾ. ಜಿ.ಡಿ.ಅಕಮಂಚಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net