ವಿಸ್ತಾರವಾಗಿ ಬೆಳೆಯುತ್ತಿರುವ ಸಾಹಿತ್ಯ ಕ್ಷೇತ್ರ: ಶಿವಾಚಾರ್ಯ ಮುಮ್ಮಡಿ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಅಭಿಮತ

State level Kavi Kavya Mela Mandya
Published on

ಮಂಡ್ಯ: ಇಂದಿನ ದಿನಮಾನಗಳಲ್ಲಿ ಸಾಹಿತ್ಯ ಕ್ಷೇತ್ರ ವಿಸ್ತಾರವಾಗಿ ಬೆಳೆಯುತ್ತಿದೆ. ಕವಿ, ಕಾವ್ಯಮೇಳದಿಂದ ಎಲೆಮರೆಕಾಯಿಯಂತಿರುವ ಕವಿಗಳು, ದೊಡ್ಡ ಸಾಹಿತ್ಯ ವೇದಿಕೆಗಳಲ್ಲಿ ಅವಕಾಶವಂಚಿತರಿಗೆ ಪೂರಕ ವೇದಿಕೆಯಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ಜಾಣ್ಮೆ ಸಾಹಿತಿಗಳದ್ದಾಗಬೇಕು ಎಂದು ದನಗೂರ ವೀರಸಿಂಹಾಸನ ಸಂಸ್ಥಾನ ಮಠದ ಶಿವಾಚಾರ್ಯ ಮುಮ್ಮಡಿ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದರು.

ನಗರದ ಗಾಂಧಿಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಘಟಕದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕವಿ ಕಾವ್ಯಮೇಳ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ, ಆಚರಣೆಗಳನ್ನು ನವೆಂಬರ್‌ತಿಂಗಳಿಗೆ ಸೀಮಿತಗೊಳ್ಳಿಸಿಕೊಳ್ಳದೆ ಸದಾ ಕನ್ನಡ ಬೆಳವಣಿಗೆಗೆ, ಸಾಹಿತ್ಯ ಸಂಸ್ಕೃತಿಗೆ ಉತ್ತೇಜನ ನೀಡುವ ಇಂತಹ ವೇದಿಕೆಗಳು ಮತ್ತಷ್ಟು ಸೃಷ್ಠಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಲೋಕಪಾವನಿ ಮಹಿಳಾ ಬ್ಯಾಂಕ್ ಅಧ್ಯಕ್ಷೆ ಸಿ.ಜೆ.ಸುಜಾತಾಕೃಷ್ಣ ಮಾತನಾಡಿ, ಇಂದಿನ ದಿನಗಳಲ್ಲಿನ ಸಾಹಿತಿಗಳ ಬರಹದಿಂದ ಸಮಾಜ ಜಾಗೃತಗೊಳ್ಳಲಿ. ಜನಸಮುದಾಯ ಸಾಹಿತ್ಯವನ್ನು ಓದುವ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುವಂತಿರಲಿ. ಅಂದಿನ ಸಾಹಿತಿಗಳ ಬರಹಕ್ಕೂ ಇಂದಿನ ಸಾಹಿತಿಗಳ ಸಾಹಿತ್ಯಕ್ಕೂ ಸಾಕಷ್ಟು ವ್ಯತ್ಯಾಸ ಕಾಣಬಹುದು. ಪುಸ್ತಕ ಓದುವಿಕೆಯಿಂದ ಸಾಕಷ್ಟು ಜ್ಞಾನ, ತಾಳ್ಮೆ ಹೆಚ್ಚಾಗುತ್ತದೆ. ಕವಿಗಳು ವಾಚಿಸುವ ಕವಿತೆ, ಕವನ-ಮತ್ತು ಬರಹಗಳು ಪುಸ್ತಕದಲ್ಲಿ ಪ್ರಟಕಗೊಳ್ಳಬೇಕು. ಆಗ ಹತ್ತಾರು ಜನ ಓದುತ್ತಾರೆ, ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಂತೆಯೇ ಕವಿಗೆ ವೇದಿಕೆ ಸಿಕ್ಕಂತಾಗುತ್ತದೆ. ಧನ್ಯತಾ ಭಾವ ಮೂಡುತ್ತದೆ ಎಂದು ತಿಳಿಸಿದರು.

ಕವಿ ಎಚ್.ಎಲ್.ಶಿವಬಸಪ್ಪ, ವೇದಿಕೆ ರಾಜ್ಯಾಧ್ಯಕ್ಷ ಪೋತೇರ ಮಹದೇವು, ಉಪಾಧ್ಯಕ್ಷೆ ಚಂದ್ರಮ್ಮ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್.ಎಂ.ಬಸವರಾಜು, ಹಾವೇರಿ ನಾಗರಾಜು, ಮೈಸೂರು ಮಂಜುಳಾ, ವೈದ್ಯ ಡಾ.ಎಚ್.ಸಿ.ಆನಂದ್, ಡಾ.ಅರವಿಂದ್, ಶ್ರೀನಿವಾಸ್, ಕೆ.ವಿ.ವೀರಪ್ಪ, ಡಿ.ನಿಂಗರಾಜು ಇತರರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಅಭಿನಂದಿಸಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿಗಳು ಕವನ, ಕವಿತೆ ವಾಚಿಸಿದರು. ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net