15 ರಿಂದ 19ರವರೆಗೆ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ

5KDR1
Published on

ಕಡೂರು: ಪಟ್ಟಣದಲ್ಲಿ ಅ.15 ರಿಂದ 19ರವರೆಗೆ ನಡೆಯಲಿರುವ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಕೊರತೆಯಾಗದಂತೆ ಸಕಲ ಸಿದ್ದತೆ ಮಾಡಿಕೊಳ್ಳಬೇಕಿದೆ ಎಂದು ಶಾಸಕ ಕೆ.ಎಸ್.ಆನಂದ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮೈಸೂರು ವಿಭಾಗೀಯ ಮಟ್ಟದ ಮತ್ತು ರಾಜ್ಯಮಟ್ಟದ ಕಬಡ್ಡಿ ಪಂದ್ಯಗಳ ತಾಲೂಕು ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮೈಸೂರು ವಿಭಾಗೀಯ ಮಟ್ಟದ ಮತ್ತು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಆತಿಥ್ಯ ವಹಿಸಲು ಕಡೂರಿಗೆ ಅವಕಾಶ ದೊರೆತಿರುವುದು ಸಂತಸ ತಂದಿದೆ. ಈ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ ವಸತಿ ಮುಂತಾದ ಸೂಕ್ತ ವ್ಯವಸ್ಥೆ, ಪಂದ್ಯಗಳು ನಡೆಯುವ ಸ್ಥಳದಲ್ಲಿ ಸೂಕ್ತ ಭದ್ರತೆ, ಕುಡಿಯುವ ನೀರಿನ ವ್ಯವಸ್ಥೆ, ಊಟ-ಉಪಹಾರದ ವ್ಯವಸ್ಥೆ ಮಾಡಿಕೊಳ್ಳಬೇಕು. ಎಲ್ಲ ಇಲಾಖೆಗಳ ಸಹಕಾರದೊಂದಿಗೆ ವಿವಿಧ ಸಮಿತಿ ರಚಿಸಿಕೊಂಡು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿದರು.
ತಾಲೂಕು ಕ್ರೀಡಾ ಸಂಯೋಜಕ ಸಿ.ಗೋಪಿ ಮಾತನಾಡಿ, ತಾಲೂಕಿನಲ್ಲಿ ಮೊದಲ ಬಾರಿಗೆ ಈ ದೊಡ್ಡಮಟ್ಟದ ಹೊನಲು ಬೆಳಕಿನ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪಂದ್ಯಾವಳಿಗಳು ನಡೆಯಲಿದೆ. ವಿವಿಧ ಜಿಲ್ಲೆಗಳಿಂದ 970 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಪಂದ್ಯಾವಳಿಗಳು ನಡೆಯಲಿವೆ ಎಂದರು.
15,16 ರಂದು ಮೈಸೂರು ವಿಭಾಗಿಯ ಮಟ್ಟದ 8 ಜಿಲ್ಲೆಗಳ ಪ್ರಾಥಮಿಕ, ಪ್ರೌಢಶಾಲೆಯ 640 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 18 ಮತ್ತು 19ರಂದು ರಾಜ್ಯಮಟ್ಟದ ಪ್ರಾಥಮಿಕ, ಪ್ರೌಢಶಾಲೆಗಳ 4 ವಿಭಾಗಗಳಿಂದ 340 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 80ಕ್ಕೂ ಹೆಚ್ಚಿನ ತೀರ್ಪುಗಾರರು ಪಂದ್ಯಾವಳಿಗಳನ್ನು ನಡೆಸಿಕೊಡಲಿದ್ದಾರೆ ಎಂದರು.
ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಇಒ ಸಿ.ಆರ್.ಪ್ರವೀಣ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿದ್ಧರಾಜನಾಯ್ಕ, ರುದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net