ಮೈಸೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೈಸೂರು ಪ್ರಾದೇಶಿಕ ಕೇಂದ್ರದಿಂದ ಜೂ.26ರಿಂದ 29ರವರೆಗೆ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ 25ನೇ ರಾಜ್ಯಮಟ್ಟದ ಅಂತರ ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳಾ ಅಥ್ಲೆಟಿಕ್ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಡಾ.ಟಿ.ಪಿ.ರೇಣುಕಮೂರ್ತಿ ಹೇಳಿದರು.
ಕ್ರೀಡಾಕೂಟಕ್ಕೆ ಅಂದು ಬೆಳಗ್ಗೆ 10ಕ್ಕೆ ಅರ್ಜುನ ಪ್ರಶಸ್ತಿ ಪುರಸ್ಕೃತೆ ಅಶ್ವಿನಿ ನಾಚಪ್ಪ ಚಾಲನೆ ನೀಡಲಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ವಿವಿಧ ತಾಂತ್ರಿಕ ವಿದ್ಯಾಲಯಗಳಿಂದ ಸುಮಾರು 1500 ರಿಂದ 2000 ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, 23 ವಿವಿಧ ಪುರುಷ ಮತ್ತು ಮಹಿಳಾ ಅಥ್ಲೆಟಿಕ್‌ಗಳು ಸ್ಪರ್ಧಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ರೀಡಾಕೂಟದ ಯಶಸ್ಸಿಗೆ ಬೋಧಕ, ಬೋಧಕೇತರ ಹಾಗೂ ಕ್ರೀಡಾ ಸಿಬ್ಬಂದಿ ಒಳಗೊಂಡ 21 ಸಮಿತಿಗಳನ್ನು ರಚಿಸಲಾಗಿದ್ದು ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ. ಮೊದಲನೆ ಬಾರಿಗೆ ಈ ಕ್ರೀಡಾಕೂಟದಲ್ಲಿ ಸ್ಪರ್ಧೆಗಳ ಫಲಿತಾಂಶಗಳನ್ನು ಫೋಟೋ ಫಿನಿಶ್ ತಂತ್ರಜ್ಞಾನ ಬಳಸಿ ನಿಖರವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳ ವಿಜೇತರಿಗೆ ಕ್ರಮವಾಗಿ 25, 20 ಮತ್ತು 15 ಗ್ರಾಂ ತೂಕದ ಶುದ್ಧ ಬೆಳ್ಳಿ ಪದಕಗಳನ್ನು ಇಡೀ ದೇಶದಲ್ಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಶೇಷವಾಗಿ ನೀಡುತ್ತ ಬಂದಿದ್ದು, ಕ್ರೀಡಾಕೂಟದ ದೃಶ್ಯಾವಳಿಗಳನ್ನು ಯುಟ್ಯೂಬ್ ಚಾನಲ್‌ನಲ್ಲಿ ಪ್ರಸಾರ ವೀಕ್ಷಿಸಬಹುದು ಎಂದು ತಿಳಿಸಿದರು.
ವಿಟಿಯು ಆಯೋಜನೆ ಕಾರ್ಯದರ್ಶಿ ಪ್ರಸನ್ನ ಕುಮಾರ್, ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ಯತೀಶ್ ಚಂದ್ರ, ಡಾ.ಜಿ.ಎಫ್. ಅಲಿ ಅಹಮದ್, ಕ್ರೀಡಾ ಸಂಯೋಜಕ ರಘುನಾಥ್ ಇದ್ದರು.