

ಮಂಡ್ಯ: ಕರ್ಮ ಸಿದ್ದಾಂತ ಮತ್ತು ಜಾತಕ ನಂಬಬೇಡಿ. ದೇವರುಗಳನ್ನ ಎಚ್ಚರದಿಂದ ನೋಡಿ. ಆದರೆ ದೇವಸ್ಥಾನಗಳ ವಾಸ್ತು ಶಿಲ್ಪವನ್ನ ಪರಿಶೀಲಿಸಿ ಜ್ಞಾನ ಹೆಚ್ಚಿಸಿಕೊಳ್ಳುವ ಮೂಲಕ ಮೂಢನಂಬಿಕೆಯಂತಹ ಶೋಷಣೆಯಿಂದ ಹೊರಬರಬಹುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದರು.
ನಗರದ ಗಾಂಧಿಭವನದಲ್ಲಿ ಭಾರತೀಯ ವಿಚಾರವಾದಿಗಳ ಒಕ್ಕೂಟ, ನೇಗಿಲಯೋಗಿ ಟ್ರಸ್ಟ್, ಏಯ್ಡ ವಿತೌಟ್ ರಿಲಿಜನ್ ಟ್ರಸ್ಟ್, ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್ ಸಹಯೋಗದಲ್ಲಿ ನಾನೇಕೆ ನಾಸ್ತಿಕ ಭಗತ್‌ಸಿಂಗ್ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಎರಡನೇ ರಾಜ್ಯಮಟ್ಟದ ವೈಚಾರಿಕನಾಸ್ತಿಕ ವಿಚಾರಗಳ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಚಾರ ಶೀಲತೆ ಬೆಳೆಸಿಕೊಳ್ಳಬೇಕಾದರೆ ಕುವೆಂಪು ಅವರನ್ನು ನೋಡಿ ಕಲಿಯಬೇಕು. ಮೂಢನಂಬಿಕೆಗಳಿಂದ ಬಹು ದೂರನೇ ಇರಬೇಕು. ಜಗತ್ತಿನಲ್ಲಿ ಯಾರಾದರೂ ಒಬ್ಬ ಸ್ವರ್ಗಕ್ಕೆ ಹೋಗಿಬಂದಿರುವವರು ಇದ್ದಾರೆಯೇ?. ಸರ್ಗಕ್ಕೆ ಹೋಗಬೇಕಾದರೆ ಇಂತಹ ಪೂಜೆ ಮಾಡಬೇಕು ಎನ್ನುವುದನ್ನ ಕಟ್ಟಿಹಾಕಿದ್ದಾರೆ ಎಂದರು.
ದೇವರ ಕಲ್ಪನೆಗಳನ್ನು ಆಚರಣೆಯಾಗಿ ಪರಿವರ್ತಿಸಿ ಮೂಢನಂಬಿಕೆಯನ್ನಾಗಿಸಲಾಗಿದೆ. ಭಾರತ ದೇಶಕ್ಕೆ ಕರ್ಮ ಸಿದ್ದಾಂತ ಎನ್ನುವ ಒಂದು ಅಟಮ್ ಬಾಂಬ್ ಅನ್ನು ಎರಡು ಸಾವಿರ ವರ್ಷದ ಹಿಂದೆಯೇ ಹಾಕಲಾಗಿದೆ. ಶತಮಾನಗಳ ಕಾಲ ಬಂಧನದಲ್ಲಿಟ್ಟರೂ ಕೂಡ ನಮಗೆ ಬುದ್ದಿ ಬಂದಿಲ್ಲ ಎಂದರೆ ಏನು ಹೇಳುವುದು ಹೇಳಿ ಎಂದು ವಿಷಾದಿಸಿದರು.
ಭಾರತೀಯ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಮಾತನಾಡಿ, ನಾಸ್ತಿಕ ಮೇಳ ಮಾಡಿದರೆ ಕೆಲವರ ಕಣ್ಣು ಕೆಂಪಗಾಗುತ್ತದೆ. ದೆಹಲಿಯಲ್ಲಿ ಸಮ್ಮೇಳನ ಮಾಡಲು ಹೊರಟಾಗ ಕೆಲವರು ಅಪಮಾನ ಮಾಡುತ್ತಿದ್ದಾರೆಂದು ಹೇಳಿ ಅವಕಾಶ ಕೊಡಲಿಲ್ಲ. ಕಾನೂನಾತ್ಮಕವಾಗಿಯೂ ತಡೆವೊಡ್ಡಿದರು. ಅದಕ್ಕಾಗಿ ನಾವು ಭಗತ್‌ಸಿಂಗ್ ಹೆಸರಿನಲ್ಲಿ ನಾನೇಕೆ ನಾಸ್ತಿಕ ಎಂಬುದನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಚರ್ಚೆ ನಡೆಸಿದರೆ ಯಾರು ತಡೆಯುತ್ತಾರೆ ನೋಡೋಣ ಹೇಳಿ ಎಂದು ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
ಪತ್ರಕರ್ತ ಬಿ.ಆರ್.ರಂಗಸ್ವಾಮಿ, ಟಿ.ಎಲ್.ಕೃಷ್ಣೇಗೌಡ, ಹರೀಶ್ ದೇಶ್‌ಮುಖ್, ಶ್ರೀನಿವಾಸ ನಟೇಕರ್ ಇತರರಿದ್ದರು.