

ಮೈಸೂರು: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರನ್ನು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪಿಸುವುದು ಎಲ್ಲರ ಕರ್ತವ್ಯ ಎಂದು ಅಜ್ಜನ ಮನೆಯ ಸಂಸ್ಥಾಪಕ ಕೃಷ್ಣ ಹೇಳಿದರು.
ಮೈಸೂರಿನ ಅಜ್ಜನ ಮನೆ ಕಲಾ ಪ್ರಪಂಚವು ನಗರದ ನಾದಬ್ರಹ್ಮ ಸಂಗೀತಾ ಸಭಾದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಹರಿದಾಸ ಸ್ಮರಣೆ ದಾಸರ ಪದಗಳ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
7 ವರ್ಷಗಳಿಂದ ಅಜ್ಜನ ಮನೆ ವಾರಕ್ಕೆ ಒಂದು ದಿನ ಅನ್ನಸಂತರ್ಪಣೆ ಏರ್ಪಡಿಸಿಕೊಂಡು ಬರುತ್ತಿದೆ. ಅವಕಾಶ ವಂಚಿತ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಲು ಸೂಕ್ತ ವೇದಿಕೆ ನೀಡಬೇಕೆಂಬ ಉದ್ದೇಶದಿಂದ 2019ರಲ್ಲಿ ಕಲಾ ಪ್ರಪಂಚ ಎಂಬ ವೇದಿಕೆ ನಿರ್ಮಾಣ ಮಾಡಿಕೊಂಡು ಇಂತಹ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು.
ದಾಸರ ಪದಗಳ ಗಾಯನ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಮಂಗಳೂರು, ಹಾಸನ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 40ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ. ಸೋಮವಾರ ಎರಡನೇ ಸುತ್ತು ಹಾಗೂ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ಭಾಗವಹಿಸಿದ್ದ ಎಲ್ಲರಿಗೂ ಪ್ರಶಂಸಾ ಪತ್ರ ನೀಡಲಾಗುವುದು. ಅಂತಿಮ ಸುತ್ತಿನಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು ಎಂದು ಕೃಷ್ಣ ಮಾಹಿತಿ ನೀಡಿದರು.
ತೀರ್ಪುಗಾರರಾಗಿ ಭಾಗವಹಿಸಿದ್ದ ವಿದುಷಿ ಗೀತಾ ಪುಟ್ಟಿ ಮಾತನಾಡಿ, ಶಾಸ್ತ್ರೀಯ ಸಂಗೀತವೆಂಬುದು ಒಂದು ಸಾಗರವಿದ್ದಂತೆ. ಅದನ್ನು ಅಧ್ಯಯನ ಮಾಡಿದಷ್ಟು ನಮ್ಮನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ. ಸಾಂಸ್ಕೃತಿಕ ನಗರದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಲೇ ಇರಬೇಕು. ಆಗ ಮಕ್ಕಳಿಗೆ ಸೂಕ್ತ ವೇದಿಕೆ ಕಲ್ಪಿಸಿದಂತಾಗುತ್ತದೆ. ಇಂತಹ ವೇದಿಕೆಯನ್ನು ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು. ಪಾಲಕರು ಸಹ ಮಕ್ಕಳಿಗೆ ಉತ್ತೇಜನ ನೀಡಬೇಕು ಎಂದರು. ಮತ್ತೊಬ್ಬ ತೀರ್ಪುಗಾರರಾಗಿದ್ದ ವಿದುಷಿ ಪದ್ಮ ಅನಂತ್, ಡಾ.ಫಣಿವೇಣಿ ಉದಯಶಂಕರ್ ಅವರು ಸಹ ತಮ್ಮ ಅನಿಸಿಕೆಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು. ಅಜ್ಜನ ಮನೆಯ ಸುಮಾ ಕೃಷ್ಣಮೂರ್ತಿ, ರಮೇಶ್, ಸತೀಶ್ ಮತ್ತಿತರರಿದ್ದರು.