

ಮಂಡ್ಯ: ಫುಟ್‌ಬಾಲ್ ಕ್ರೀಡೆಯಲ್ಲಿ ತೊಡಗಿಕೊಂಡವರು ದೇಶ ವಿದೇಶಗಳಲ್ಲಿ ಸಾಧನೆ ಮಾಡಿದ್ದಾರೆ. ಮಾತ್ರವಲ್ಲದೆ ಹಲವರ ಬದುಕು ಬದಲಾಯಿಸಿದೆ ಎಂದು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಅಧ್ಯಕ್ಷ ಎ.ನಾಗರಾಜು ಹೇಳಿದರು.
ನಗರದ ಬಿ.ಜಿ ದಾಸೇಗೌಡ ಕ್ರೀಡಾಂಗಣದಲ್ಲಿ ಸ್ವರ್ಣ ಫುಟ್‌ಬಾಲ್ ಅಭಿವೃದ್ಧಿ ಸಂಸ್ಥೆ, ಜಿಲ್ಲಾ ಫುಟ್‌ಬಾಲ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆರಂಭವಾದ 2ನೇ ವರ್ಷದ ರಾಜ್ಯಮಟ್ಟದ ಮುನ್ನ ಕಪ್ ಫುಟ್‌ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದವರು ವಿವಿಧ ಇಲಾಖೆಗಳಲ್ಲಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಸಂಸ್ಥೆಗೆ ಜಿಲ್ಲಾ ಯುವಪ್ರಶಸ್ತಿ ಜತೆಗೆ 5 ಲಕ್ಷ ರೂ ಬಹುಮಾನವೂ ಬಂದಿದೆ. ಪ್ರಮುಖವಾಗಿ ಸೈನಿಕರಾಗಿಯೂ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದು ಶ್ಲಾಘಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಮುನಾವರ್ ಪಾಷ ಮಾತನಾಡಿ, ಫುಟ್‌ಬಾಲ್ ಪಂದ್ಯಾವಳಿಯ ಮೇಲೆ ಆಸಕ್ತಿ ಇರುವುದರಿಂದ ಇಂತಹ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದೇನೆ. ಇದರಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಮೂಲಕ ಅವರ ಭವಿಷ್ಯಕ್ಕೆ ಬುನಾದಿ ಹಾಕಿಕೊಳ್ಳುವ ಕ್ರೀಡೆಯೂ ಆಗಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಇವರಿಗೆ ವಸತಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗಿದೆ ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ವಿ.ವೇಣುಗೋಪಾಲ್, ವಿಶೇಷ ಪ್ರತಿನಿಧಿ ಬಿ.ವೆಂಕಟ್, ಬೆನಕ ಫುಟ್‌ಬಾಲ್ ಸಂಸ್ಥೆ ಅಧ್ಯಕ್ಷ ಟಿ.ವರಪ್ರಸಾದ್, ನಗರಸಭೆ ಸದಸ್ಯ ರಾಮಲಿಂಗಯ್ಯ ಭಾಗವಹಿಸಿದ್ದರು.