ಮೈಸೂರಿನಲ್ಲಿ ರಾಜ್ಯ ಮಟ್ಟದ ಜಾನಪದ, ಬೀದಿ ನಾಟಕೋತ್ಸವ

Published on

ಮೈಸೂರು: ಕರ್ನಾಟಕ ಬೀದಿನಾಟಕ ಪರಿಷತ್‌ನಿಂದ ನ.29ರಂದು ನಗರದ ಕಿರು ರಂಗಮಂದಿರದಲ್ಲಿ ರಾಜ್ಯ ಮಟ್ಟದ ಜಾನಪದ, ಬೀದಿ ನಾಟಕೋತ್ಸವ ಹಾಗೂ ಬೀದಿ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಪರಿಷತ್‌ನ ಮುಖ್ಯ ಸಂಚಾಲಕ ಎಚ್.ಪಿ.ವೈರಮುಡಿ ಹೇಳಿದರು.
ಅಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದು, ಸಚಿವ ಚಲುವರಾಯಸ್ವಾಮಿ ಕಲಾ ಜಾಥಾಗೆ ಚಾಲನೆ ನೀಡಲಿದ್ದಾರೆ. ಬೀದಿ ನಾಟಕ ಕಲಾ ತಂಡಗಳು ಸ್ಥಳೀಯ ಮಾಧ್ಯಮದಂತೆ ಕೆಲಸ ಮಾಡುತ್ತಿದ್ದು, ಸರ್ಕಾರ ಉತ್ತಮ ಅವಕಾಶ ಒದಗಿಸುವಂತೆ ಕಾರ್ಯಕ್ರಮದಲ್ಲಿ ಒತ್ತಾಯಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು, ಬೆಂಗಳೂರು ಬೆಳಗಾವಿ ವಿಭಾಗದ 15 ಜಿಲ್ಲೆಗಳ 15 ತಂಡಗಳು, ವಾರ್ತಾ ಮತ್ತು ಸಂಪರ್ಕ ಇಲಾಖೆಯ 2 ತಂಡ, ಬೀದಿನಾಟಕ ಕಲಾತಂಡಗಳ ಒಕ್ಕೂಟದ ಮೂರು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಪ್ರಥಮ ಸ್ಥಾನಕ್ಕೆ ನಾಲ್ಕು ಸಾವಿರ ರೂ., ದ್ವಿತೀಯ ಸ್ಥಾನಕ್ಕೆ ಮೂರು ಸಾವಿರ ರೂ.ಮತ್ತು ತೃತೀಯ ಸ್ಥಾನಕ್ಕೆ ಎರಡು ಸಾವಿರ ರೂ.ಮತ್ತು ಸಮಾಧಾನಕರವಾಗಿ ಒಂದು ಸಾವಿರ ರೂ.ನಗದು ಬಹುಮಾನ ನೀಡಲಾಗುತ್ತಿದೆ ಎಂದರು.
ಪರಿಷತ್ ಸಂಚಾಲಕರಾದ ಸಂತೆಕಸಲಕೆರೆ ಬಸವರಾಜು, ಎನ್.ಶೇಖರ್, ಕಾತ್ಯಾಯಿನಿ, ಸವಿತಾ, ವಿನುತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net