ಕೆವಿಎಸ್ ಸಾಧನೆ ಹಾಡಿನ ರೂಪವಾಗಲಿ: ಪಿಇಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲ ಡಾ.ನೀಲಕಂಠ ಹೇಳಿಕೆ

State level folk song competition Mandya
Published on

ಮಂಡ್ಯ: ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ಸಾಧನೆ ಕುರಿತು ಜಾನಪದ ಗೀತೆ ಹಾಗೂ ಹಾಡುಗಳು ರಚನೆಯಾಗಲಿ ಎಂದು ಪಿಇಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲ ಡಾ.ನೀಲಕಂಠ ಹೇಳಿದರು.

ನಗರದ ಪಿಇಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಿದ್ದ 29ನೇ ವರ್ಷದ ಕೆ.ವಿ.ಶಂಕರಗೌಡ ಸ್ಮರಣಾರ್ಥ ರಾಜ್ಯಮಟ್ಟದ ಜನಪದ ಗೀತೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದ ಅಭಿವೃದ್ದಿಗೆ ತಮ್ಮನ್ನೇ ತಾವೂ ಸಮರ್ಪಿಸಿಕೊಂಡು ಶಿಕ್ಷಣ, ರಾಜಕೀಯ, ಸಹಕಾರ, ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ಸಾಧನೆಗಳ ಬಗ್ಗೆ ಮುಂದಿನ ಪೀಳಿಗೆಗೂ ಪರಿಚಯವಾಗಬೇಕು ಎಂದರು.

ನಾವು ಕಂಡಂತೆ ಒಬ್ಬ ಸಚಿವರನ್ನು ನಿತ್ಯ ಸಚಿವರೆಂದು ಗುರುತಿಸಿ ಗೌರವಕ್ಕೆ ಪಾತ್ರರಾಗಿರುವ ಏಕೈಕ ಅಸಾಮಾನ್ಯ ವ್ಯಕ್ತಿ ಕೆ.ವಿ.ಶಂಕರಗೌಡ ಅವರು ಮಾತ್ರ ಇರಬೇಕು. ಈಗಲೂ ಕೆವಿಎಸ್ ಅವರ ಕುಟುಂಬ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಈ ವಿಷಯವನ್ನು ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ. ಇಂದಿನ ದಿನಗಳಲ್ಲಿ ಜಾನಪದ ಕ್ಷೇತ್ರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪಿಇಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರತಿವರ್ಷ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ಸ್ಮರಣಾರ್ಥ ಸ್ಪರ್ಧೆ ರೂಪಿಸಿ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಹಲವಾರು ಗಾಯಕರು ಯುವ ಗಾಯಕರು ಭಾಗಿಯಾಗಿ ತಮ್ಮ ಪ್ರತಿಭೆ ಅನಾವರಣಗೊಳಿಸುತ್ತಿದ್ದಾರೆ ಎಂದರು.

ಉಪ ಪ್ರಾಂಶುಪಾಲ ಡಾ.ಎಸ್.ಕೆ.ವೀರೇಶ್ ಮಾತನಾಡಿ, ಜಾನಪದ ಸೊಗಡು, ಪದ್ದತಿಯಿಂದ ಮಾತ್ರ ಎಲ್ಲವೂ ಗಟ್ಟಿಯಾಗಿ ಉಳಿದು ಬೆಳೆಯಲು ಸಾಧ್ಯವಿದೆ. ಸಾಕಷ್ಟು ಬದಲಾವಣೆಯಾಗಬಹುದು. ಆದರೆ ಜಾನಪದ ತನ್ನದೇ ಮೂಲವನ್ನು ಬದಲಿಸದು. ವಿಧಾನಗಳು ಬದಲಾಗಬಹುದು, ಆದರೆ ಮೂಲಸ್ವರೂಪ ಅದೇ ಸೊಗಡು ನೀಡುತ್ತದೆ. ನಾಟಿ ಕೋಳಿ ಸಾರು, ರಾಗಿಮುದ್ದೆ, ಸೊಪ್ಪು ಉಪ್ಸಾರು ಮುದ್ದೆ ಊಟದ ಮುಂದೆ ಫೈಸ್ಟಾರ್ ಹೋಟೆಲ್ ಊಟವೂ ರುಚಿಸದು. ಜಾನಪದ ಉಡುಪು, ಕ್ರೀಡೆಗಳು, ಆಟಗಳು ವೈಜ್ಞಾನಿಕ ಸಂದೇಶ ಸಾರುತ್ತವೆ. ಒಗ್ಗಟ್ಟು ಹೆಚ್ಚಿಸುತ್ತವೆ. ತಮಟೆ ನಗಾರಿ ಸದ್ದಿನ ಮುಂದೆ ವಿದೇಶಿ ಸಂಗೀತ ನಿಲ್ಲದು. ಜಾನಪದ ಉಳಿಸುವುದು, ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಜಾನಪದಿಂದ ಮಾತ್ರ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ನೆಮ್ಮದಿಯಾಗಿ ಬದುಕು ಸಾಗಿಸಲು ಸಾಧ್ಯ ಎಂದು ಹೇಳಿದರು.

ಸ್ಪರ್ಧೆಯ ವಿಜೇತರಿಗೆ ಪಿಇಟಿ ಉಪಾಧ್ಯಕ್ಷ ಶ್ರೀಧರ್ ಬಹುಮಾನ ವಿತರಿಸಿದರು. ಹಿನ್ನಲೆ ಗಾಯಕಿ ಸಿಂಚನಾ ಗೋಪಾಲ್, ಪ್ರಾಧ್ಯಾಪಕರಾದ ಡಾ.ಎಚ್.ಕೆ.ಅಭಿಲಾಷ, ಡಾ.ವಿಜಯಲಕ್ಷ್ಮೀ ಮಾನಪುರ, ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ರೇಣುಕಯ್ಯ, ಪ್ರೊ. ಡೇವಿಡ್, ಪ್ರೊ.ಮರಿಯಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net