

ನಾಗಮಂಗಲ : ಮನುಕುಲದ ಸಂಸ್ಕೃತಿಯಾದ ಜಾನಪದ ಕಲೆಯನ್ನು ಸಂರಕ್ಷಿಸಿ ಅದರ ಪುರೋಭಿವೃದ್ಧಿಗಾಗಿ ಚಿಂತಿಸುತ್ತಿದ್ದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಶ್ರೀಗಳ ಜನಪದ ಕಲೆ, ಸಾಹಿತ್ಯವನ್ನು ರಕ್ಷಿಸಿ, ಉಳಿಸಿ ಬೆಳೆಸುವ ಜತೆಗೆ ಕಲಾವಿದರ ಬದುಕು ಹಸನಗೊಳಿಸುವ ಉದ್ದೇಶದಿಂದ ಸೆ.23 ರಿಂದ 25ರ ವರೆಗೆ ಮೂರು ದಿನಗಳ ಕಾಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನಮಠದಲ್ಲಿ ರಾಜ್ಯಮಟ್ಟದ 45ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳ, ಚುಂಚಶ್ರೀ ಪ್ರಶಸ್ತಿ ಪ್ರದಾನ ಹಾಗೂ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಗುರು ಸಂಸ್ಮರಣೋತ್ಸವ ಸಮಾರಂಭ ನಡೆಯಲಿದೆ.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯುವ ಕಲಾಮೇಳವನ್ನು ಸೆ.23ರ ಸಂಜೆ 5 ಗಂಟೆಗೆ ಶ್ರೀಗಳ ಜತೆಗೂಡಿ ಗಣ್ಯರು ಉದ್ಘಾಟಿಸಲಿದ್ದಾರೆ. ಸೆ.24ರ ಬೆಳಗ್ಗೆ 10.30ಗಂಟೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅದೇ ದಿನ ಸಂಜೆ 7 ಗಂಟೆಗೆ ಕ್ಷೇತ್ರದ ಜೋಡಿ ರಸ್ತೆಯಲ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸರ್ವಾಲಂಕೃತ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಜಾನಪದ ಕಲಾವಿದರ ವರ್ಣರಂಜಿತ ಮೆರವಣಿಗೆ ನಡೆಯುತ್ತದೆ. ಆ ಬಳಿಕ ಶ್ರೀಕಾಲಭೈರವೇಶ್ವರಸ್ವಾಮಿ ಪುಷ್ಕರಣೆಯಲ್ಲಿ ತೆಪ್ಪೋತ್ಸವ ಜರುಗಲಿದೆ.
ಸೆ.25ರ ಬೆಳಗ್ಗೆ 9.30ಗಂಟೆಗೆ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ವಾರ್ಷಿಕ ಪಟ್ಟಾಭಿಷೇಕ, ಶ್ರೀಗುರು ಸಂಸ್ಮರಣೋತ್ಸವ ಮತ್ತು ರಾಜ್ಯಮಟ್ಟದ 45ನೇ ಶ್ರೀಕಾಲಭೈರವೇಶ್ವರ ಜಾನಪದ ಕಲಾಮೇಳದ ಸಮಾರೋಪ ಸಮಾರಂಭ ನಡೆಯಲಿದ್ದು, ಜಾನಪದ ಕ್ಷೇತ್ರದ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಜಾನಪದ ಕಲಾಮೇಳದಲ್ಲಿ ಭಾಗವಹಿಸುವ ಕಲಾವಿದರಿಗೆ ವಸ್ತ್ರ ಸೇರಿದಂತೆ ಪ್ರಯಾಣ ಭತ್ಯೆ ಹಾಗೂ ಉಚಿತವಾಗಿ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುವುದು. ಜಾನಪದ ಕಲಾಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಕಲಾವಿದರು ತಮ್ಮ ಆಧಾರ್‌ಕಾರ್ಡ್ ಜತೆಗೆ ತಮ್ಮ ಜಿಲ್ಲೆಯ ಆದಿಚುಂಚನಗಿರಿ ಶಾಖಾ ಮಠ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾಗವಹಿಸುವಿಕೆಯ ಪತ್ರವನ್ನು ಕಡ್ಡಾಯವಾಗಿ ತರತಕ್ಕದ್ದು. ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.