ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

State level educational session Mandya
Published on

ಮಂಡ್ಯ: ಆರ್ಥಿಕ ಸುಧಾರಣೆಯನ್ನು ಗಣನೆಗೆ ತೆಗೆದುಕೊಂಡು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ರಾಜ್ಯಸರ್ಕಾರವು ಶಿಕ್ಷಕರ ವಿರುದ್ಧವಾಗಿಲ್ಲ, ಬದಲಿಗೆ ಪರವಾಗಿದೆ. ಅದೇ ರೀತಿ ಕಾನೂನು ಸಲಹೆ ತೆಗೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಗೆಹರಿಸಿಕೊಡುವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಅಧಿವೇಶನ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಹಾಗೂ ಸರ್ವ ಸದಸ್ಯರ ಸಭೆಯ ಮಾತನಾಡಿದ ಅವರು, ಶಿಕ್ಷಕರಿಗೆ ಸಮಸ್ಯೆ ಇದೆ. ಏಳನೇ ವೇತನ ಆಯೋಗ ಆಗಿದೆ. ಮುಖ್ಯಮಂತ್ರಿ ಅವರು ನಿಮ್ಮ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ. ಎನ್‌ಪಿಎಸ್, ಒಪಿಎಸ್ ಎಲ್ಲವೂ ಕಾನೂನು ಚೌಕಟ್ಟಿನಲ್ಲಿ ಆಗಿರುತ್ತದೆ. ಇದಕ್ಕೆ ನಾವು ಕಾರಣವಲ್ಲ. ಬದಲಿಗೆ ಹಿಂದಿನ ಸರ್ಕಾರ. ಪ್ರಸ್ತುತ 50 ಸಾವಿರ ಶಿಕ್ಷಕರ ಕೊರತೆ ಇದೆ ಎಂದರೆ ನಾವು ಮಾಡಿದ್ದೀವಾ?. ಹಿಂದೆ ಮಾಡಿರುವುದನ್ನು ನಾವು ಏನು ಮಾಡುವುದಕ್ಕೆ ಆಗುತ್ತದೆ. ಕೃಷಿ ಇಲಾಖೆಯಲ್ಲಿಯೇ ಶೇ.60 ರಷ್ಟು ಉದ್ಯೋಗ ಖಾಲಿ ಇದೆ. ಈ ನಿಟ್ಟಿನಲ್ಲಿ ಒಂದು ಸಾವಿರ ಜನರನ್ನು ನೇಮಕ ಮಾಡುತ್ತಿದ್ದೇವೆ. ಆದ್ದರಿಂದ ತಾಳ್ಮೆಯಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಇಲಾಖೆಯಲ್ಲಿರುವ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸುತ್ತೇವೆ. ಒಪಿಎಸ್ ಜಾರಿಗೆ ತರುತ್ತೇವೆಂದು ಪ್ರಣಾಳಿಕೆಯಲ್ಲಿ ಹೇಳಿ ಮತ ತೆಗೆದುಕೊಂಡಿದ್ದೇವೆ. ಕೈ ಮುಗಿದು ಕೇಳಿಕೊಳ್ಳುತ್ತೇನೆ. ಸಿದ್ದರಾಮಯ್ಯ ಅವರು ಮಾತು ಕೊಟ್ಟಂತೆ ನಡೆದುಕೊಳ್ಳುತ್ತಾರೆ. ಕೆಲವು ಕಾನೂನು ತೊಡಕುಗಳನ್ನು ನಿವಾರಿಸಿ ಒಂದು ತಿಂಗಳೊಳಗೆ ತೀರ್ಮಾನ ಕೈಗೊಳ್ಳಲಾಗುವುದು. ಶಿಕ್ಷಕರ ಹಿತದೃಷ್ಟಿಯಿಂದ ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಸ್ವಲ್ಪ ವಿಳಂಬವಾಗಿದೆ ಎಂದರು.

ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಶಿಕ್ಷಣದಿಂದ ಮಾತ್ರ ಹಲವು ವೃತ್ತಿಗಳನ್ನು ಹುಟ್ಟುಹಾಕಲು ಸಾಧ್ಯ. ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಸರ್ಕಾರಿ ಶಾಲೆಗಳ ಮೇಲೆ ಜನರಿಗೆ ಇರುವ ತಾತ್ಸಾರ ಭಾವನೆ ಹೋಗಲಾಡಿಸಬೇಕು. ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲೂ ಸಹ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಶಿಕ್ಷಕರು ಸದಾ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಪುಸ್ತಕದ ಪಾಠವನ್ನು ಎಲ್ಲರೂ ಮಾಡುತ್ತಾರೆ. ಆದರೆ ಮಕ್ಕಳಿಗೆ ಜೀವನ ಪಾಠವನ್ನು ಹೇಳಿಕೊಡುವುದು ಶಿಕ್ಷಕರಿಂದ ಮಾತ್ರ ಸಾಧ್ಯ. ಮುಖ್ಯವಾಗಿ ಜೀವನ ಶೈಲಿ ರೂಪಿಸಿಕೊಳ್ಳಲು ಸಹಕಾರಿಸಬೇಕು. ಇಲ್ಲವಾದಲ್ಲಿ ನೀವು ಆದರ್ಶ ಶಿಕ್ಷಕರಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಶಾಸಕರಾದ ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.

State level educational session Mandya

ಶಿಕ್ಷಣ ತಜ್ಞ ಬರಗೂರು ರಾಮಚಂದ್ರಪ್ಪ ಮಾತನಾಡಿ, ದೇಶದಲ್ಲಿ ಮುಖ್ಯ ಸಮಸ್ಯೆಯಾಗಿರುವ ಶೈಕ್ಷಣಿಕ ಅಸಮಾನತೆ ಹೋಗಲಾಡಿಸಬೇಕು. ಬಡಮಕ್ಕಳು ಅಂಗನವಾಡಿಗೆ ಹೋದರೆ, ಉಳ್ಳವರ ಮಕ್ಕಳು ಖಾಸಗಿ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿಗೆ ಹೋಗುತ್ತಾರೆ. ಇದರಿಂದ ಕೆಲವರಿಗೆ ಮಾತ್ರ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಸಮಸ್ಯೆ ಬಗೆಹರಿಸಿ, ಹೊಸ ಶಿಕ್ಷಣ ನೀತಿಯನ್ನು ರೂಪಿಸಿ ಬಡಮಕ್ಕಳ ಸರ್ಕಾರಿ ಶಾಲೆ ಉಳಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ಸರ್ಕಾರಿ ಶಾಲೆಗಳು ಸ್ಮಾರಕ ಮಂದಿರ ಆಗಲಿವೆ ಎಂದರು.

ಪ್ರಾಥಮಿಕ ಶಿಕ್ಷಣದಲ್ಲಿ ಶಿಕ್ಷಕರು ಎದುರಿಸುತ್ತಿರುವ ಸವಾಲುಗಳು ಹಾಗೂ ಸಮಸ್ಯೆ ಕುರಿತು ಮಾತನಾಡಿದ ಅವರು, ಅಸಮಾನತೆಯನ್ನು ಪರಿಹರಿಸುವುದೇ ಮೊದಲ ಪ್ರಶ್ನೆಯಾಗಬೇಕು. ಶಿಕ್ಷಕರ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ಶಿಕ್ಷಣದ ಸಮಸ್ಯೆಯಾಗಿದೆ. ದೇಶದಲ್ಲಿ 10.83 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಿವೆ. ಕರ್ನಾಟಕದಲ್ಲಿ 44,615 ಪ್ರಾಥಮಿಕ, 5 ಸಾವಿರ ಪ್ರೌಢಶಾಲೆ, 1200ಕ್ಕೂ ಹೆಚ್ಚು ಕಾಲೇಜುಗಳಿವೆ. ಖಾಸಗಿ ಸೇರಿಸಿದರೆ 62 ಸಾವಿರಕ್ಕೂ ಹೆಚ್ಚಿವೆ. ಸರ್ಕಾರಿ ಶಾಲಾ ಕಾಲೇಜಿನಲ್ಲಿ ಕಲಿಯುತ್ತಿರುವವರು ಬಡವರಿದ್ದಾರೆ. ಆದ್ದರಿಂದ ಶಿಕ್ಷಣವನ್ನು ಗ್ಯಾರಂಟಿ ಒಳಗೆ ತಂದು ಕ್ರಿಯಾ ಯೋಜನೆ ತಯಾರಿಸಬೇಕು ಎಂದು ಒತ್ತಾಯಿಸಿದರು.

ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎನ್ನುವ ಕಾರಣಕ್ಕಾಗಿ ಎನ್‌ಇಪಿಯನ್ನು ವಿರೋಧಿಸಿದ್ದೆವು. ಎನ್‌ಇಪಿ ಬದಲು ಎಸ್‌ಇಪಿ ಜಾರಿ ಮಾಡಲು ಸಮಿತಿ ರಚನೆಯಾಗಿದ್ದು, ಈಗ ಎಲ್ಲಿ ಹೋಗಿದೆ ಎಂಬ ಪ್ರಶ್ನೆ ಮೂಡಿದೆ. ಅಂದು ಅಷ್ಟೆಲ್ಲ ದಿಟ್ಟ ನಿಲುವು ತೆಗೆದುಕೊಂಡ ಸರ್ಕಾರದ ನಡೆಗೆ ಬೆಂಬಲ ಕೊಟ್ಟೆವು. ಇಲ್ಲಿವರೆಗೆ ಎಸ್‌ಇಪಿ ಒಂದು ಮಧ್ಯಂತರ ವರದಿ 14 ಪುಟದಲ್ಲಿದೆ. ಅದು ವರದಿಯಲ್ಲ, ಟೈಂ ಟೇಬಲ್ ತರಹ ಇದೆ. ಇದು ಜಾರಿಯಾಗದೇ ಹೋದರೆ ಕಾಲೇಜು ಮತ್ತು ಶಾಲಾ ಶಿಕ್ಷಣ ಬಹಳ ಗೊಂದಲದಲ್ಲಿರುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net