

ಮಂಡ್ಯ: ಸಮಾಜದಲ್ಲಿ ದೇವರ ಸ್ಥಾನವನ್ನು ವೈದ್ಯರಿಗೆ ನೀಡಲಾಗಿದೆ. ವೇದಗಳಲ್ಲಿಯೂ ಇದನ್ನೇ ಹೇಳಿರುವ ಉದಾಹರಣೆಗಳು ಸಿಗುತ್ತವೆ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಸಭಾಂಗಣದಲ್ಲಿ ಅಸೋಸಿಯೇಷನ್ ಆಫ್ ಫಿಸಿಷಿಯನ್ ಆಫ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನದ 41ನೇ ರಾಜ್ಯಮಟ್ಟದ ವೈದ್ಯರ ಸಮ್ಮೇಳನ-2024 ವನ್ನು ಉದ್ಘಾಟಿಸಿ ಮಾತನಾಡಿದರು.
ವೈದ್ಯೋ ನಾರಾಯಣೋ ಹರಿಃ ಎಂಬ ಶಬ್ಧದ ಮೂಲಕ ದೇವರ ಸ್ವರೂಪಿ ಎಂಬುದನ್ನು ವೈದ್ಯರಿಗೆ ಗೌರವ ಸಲ್ಲಿಸಲು ಹೇಳಲಾಗುತ್ತದೆ. ಏಕೆಂದರೆ ರೋಗಗ್ರಸ್ಥನಿಗೆ ಪ್ರಾಣ ಉಳಿಸುವುದಕ್ಕೆ ದೇವರು ಎಂಬ ಬಿರುದನ್ನು ವೈದ್ಯರಿಗೆ ಹೇಳಲಾಗುತ್ತದೆ. ವೈದ್ಯರಾದವರು ದೇವರಿಗೆ ಸಮಾನವಾಗಿರುತ್ತಾರೆ ಎನ್ನುವುದರ ಅರ್ಥವನ್ನು ಸಹ ತಿಳಿಸುತ್ತದೆ ಎಂದರು.
ಮನುಷ್ಯನರಿಗೆ ಎರಡು ರೋಗವಿರುತ್ತದೆ. ಒಂದು ಶಾರೀರಿಕ ಮತ್ತು ಇನ್ನೊಂದು ಮಾನಸಿಕ ರೋಗ. ಶಾರೀರಿಕ ರೋಗಕ್ಕೆ ವೈದ್ಯರಿದ್ದಾರೆ, ಮಾನಸಿಕ ರೋಗಕ್ಕೆ ಮಾನಸಿಕವಾಗಿ ನಾವೇ ವೈದ್ಯರು ಆಗಿರುತ್ತೇವೆ. ಈ ಶಿಬಿರದಲ್ಲಿ ಗುರುಶಿಷ್ಯರ ಪರಂಪರೆ ಕಾಣುತ್ತದೆ. ಏಕೆಂದರೆ ವೈದ್ಯರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಗುರುವಿಗೆ ವಂದಿಸುವ ಕೆಲಸವನ್ನು ಸಹ ಗೌರವಿಸುವ ಮೂಲಕ ಮಾಡಿರುವುದು ಶ್ಲಾಘನೀಯ ಎಂದರು.
ರಾಷ್ಟ್ರೀಯ ಪಿಸಿಷಿಯನ್ ಅಸೋಷಿಯನ್ ಅಧ್ಯಕ್ಷ ಜ್ಯೋತಿರ್ಮಯಿ ಪಾಲ್ ಮಾತನಾಡಿ, ವೈದ್ಯರಿಗೆ ಸಂಬಂಧಪಟ್ಟಂತಹ ಶಿಬಿರಗಳು ಸ್ಟಾರ್ ಹೋಟೆಲ್‌ಗಳಲ್ಲಿ ಆಗಬಾರದು. ಬದಲಿಗೆ ಮೆಡಿಕಲ್ ಕಾಲೇಜಿನ ಆವರಣ ಮತ್ತು ಪಿಸಿಷಿಯನ್ಸ್‌ಗಳಿರುವ ಕಡೆ ನಡೆದರೆ ಅಂತಹ ಶಿಬಿರಗಳು ಪ್ರಯೋಜನಕ್ಕೆ ಬರುತ್ತವೆ ಎಂದರು.
ಭಾರತ ರಾಜಕೀಯ ಮತ್ತು ಭೌಗೋಳಿಕವಾಗಿ ಮುಂದುವರಿದಿರುವ ದೇಶ. ಇಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೂ ಸಹ ಗೆಲುವು ಸಿಗುತ್ತದೆ. 1944 ರಲ್ಲಿ ಇಂತಹ ಪಿಸಿಷಿಯನ್ ಸಮ್ಮೇಳನಗಳು ಆರಂಭವಾಗಿದ್ದು, ಪ್ರಸ್ತುತದಲ್ಲಿನವರೆಗೂ ವೈದ್ಯರ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಕಾರ್ಯಾಗಾರಗಳು ಯಶಸ್ವಿಯಾಗಿವೆ ಎಂದು ಶ್ಲಾಘಿಸಿದರು.
ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ಎ.ಶೇಖರ್, ಕೆಎಪಿಐಸಿಒಎನ್ ರಾಜ್ಯಾಧ್ಯಕ್ಷ ಡಾ.ಬಿ.ವಿ.ಮುರಳಿ ಮೋಹನ್, ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮ್, ಸಮ್ಮೇಳನದ ಉಸ್ತುವಾರಿ ಡಾ.ಕೆ.ಎಂ.ಶಿವಕುಮಾರ್, ಡಾ.ಮೋಹನ್‌ಕುಮಾರ್, ಡಾ.ವಿಶ್ವನಾಥ್, ಡಾ.ಉತ್ತಮ್‌ಚಂದ್, ಡಾ.ಎಂ.ಸಿ.ರೇಖಾ, ಡಾ.ಚಂದ್ರೇಗೌಡ, ಡಾ.ಮಂಜುನಾಥ್ ಇತರರಿದ್ದರು.
ಜೀವಮಾನದ ಸಾಧನೆಗಾಗಿ ಹಿರಿಯ ವೈದ್ಯರಾದ ಡಾ.ಶ್ರೀನಿವಾಸ್, ಡಾ.ಎ.ಎಂ.ಪ್ರಸನ್ನಕುಮಾರ್, ಡಾ.ಕೋಟಿಪಾಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮ್ಮೇಳನದ ಸರ್ಣ ಸಂಚಿಕೆಯನ್ನು ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ಬಿಡುಗಡೆ ಮಾಡಿದರು. ಸಮ್ಮೇಳನದಲ್ಲಿ 1,300 ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಸೇರಿದಂತೆ ಭಾಗವಹಿಸಿದ್ದರು.