

ಸವದತ್ತಿ: ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ವಿಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯ ಮತ್ತು ಹಳೆಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಏ.7ರಂದು ಇಲ್ಲಿನ ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಎನ್.ಆರ್.ಸವತಿಕರ ಮಾಹಿತಿ ನೀಡಿದರು.
ಇಲ್ಲಿನ ಎಸ್‌ವಿಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಮೊದಲ ಬಾರಿಗೆ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 5 ಸಾವಿರ ರೂ., ದ್ವಿತೀಯ-3 ಸಾವಿರ ರೂ., ತತೀಯ- 2 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಒಟ್ಟು 12 ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ವಕೀಲ ರಾಜಶೇಖರ ನಿಡವಣಿ ಮಾತನಾಡಿ, ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವಿರೂಪಾಕ್ಷ ಮಾಮನಿ ಅಧ್ಯಕ್ಷತೆ ವಹಿಸಲಿದ್ದು, ಪ್ರಾಚಾರ್ಯ ಡಾ.ಎನ್.ಆರ್.ಸವತಿಕರ, ಸಂಘಟನಾ ಕಾರ್ಯದರ್ಶಿ ಪ್ರೊ. ಕೆ.ರಾಮರೆಡ್ಡಿ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ನಿಡವಣಿ, ಐಕ್ಯೂಎಸಿ ಸಂಯೋಜಕಿ ಎ.ಎ.ಹಳ್ಳೂರ ಉಪಸ್ಥಿತರಿರುವರು ಎಂದರು.
ಪ್ರೊ. ಕೆ. ರಾಮರೆಡ್ಡಿ ಮಾತನಾಡಿ, ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಯ 8 ಕಾಲೇಜಿನಿಂದ ವಿವಿಧ ಸ್ಪರ್ಧೆಗಳಿಗೆ ನೋಂದಣಿಯಾಗಿವೆ. 15ಕ್ಕೂ ಅಧಿಕ ಕಾಲೇಜು ಸೇರುವ ನಿರೀಕ್ಷೆ ಇದೆ. ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ನತ್ಯ ಸ್ಪರ್ಧೆಗಳು ಗುರುಭವನದಲ್ಲಿ ಹಾಗೂ ಗಾಯನ ಸ್ಪರ್ಧೆಗಳು ಮಹಾವಿದ್ಯಾಲಯದಲ್ಲಿ ನಡೆಸಲಾಗುವುದು ಎಂದರು. ಮಧ್ಯಾಹ್ನ 4 ಕ್ಕೆ ನಡೆಯುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಡಳಿಯ ಸದಸ್ಯ ಉಮೇಶ ಬಾಳಿಯವರು ಭಾಗವಹಿಸಿ ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಿ ಸಮಾರೋಪ ನುಡಿಗಳನ್ನಾಡಲಿದ್ದು, ಮಂಡಳಿಯ ಸದಸ್ಯರಾದ ಬಿ.ವಿ.ಮಲಗೌಡರ ಅಧ್ಯಕ್ಷತೆ ವಹಿಸಲಿದ್ದಾರೆ.
ಬಸವರಾಜ ಮಟ್ಟಿ, ಮಂಜುನಾಥ ಕೊಳ್ಳಿ, ಉಲ್ಲಾಸ ಕಲ್ಲೂರ, ಬಸಪ್ಪ ಮಡಿವಾಳರ, ವೆಂಕಟೇಶ ಕೊಳಚಿ, ಮಂಜುನಾಥ ದ್ಯಾಮಣ್ಣವರ, ಮಹ್ಮದ್‌ಸಾಬ ಯಲಿಗಾರ, ಅಶೋಕ ವಿಘ್ನೇಶಿ, ನಾಗರಾಜ ಸೋಗಿ, ಶ್ರೀನಿವಾಸ ಬಡಿಗೇರ, ಶಶಿಧರ ಹಿಟ್ನಳ್ಳಿ, ಉಗರಗೋಳದ ಜಗದನಗೌಡ ಪೋಲೇಶಿ, ಜಮಖಂಡಿಯ ಇಂದು ಮೀಶಿಯವರು ನಗದು ಬಹುಮಾನಗಳ ಪ್ರಾಯೋಜಕರಾಗಿ ಬೆಂಬಲಿಸಿದ್ದಾರೆ ಎಂದರು.