

ಮೈಸೂರು: ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ಕಲಾಧಾರೆ ಕಲ್ಚರಲ್ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ಚಾಮರಾಜ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಲಾಧಾರೆ ಕಲ್ಚರಲ್ ಟ್ರಸ್ಟ್, ಮಾಸ್ಟರ್ ಎನ್ ಬ್ಲಾಸ್ಟರ್ ಡ್ಯಾನ್ಸ್ ಗ್ರೂಪ್ ವತಿಯಿಂದ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ 23ನೇ ವರ್ಷದ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಇದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮೊದಲಾದವುಗಳಿಗೆ ಹೆಸರಾದ ಮೆಸೂರಿನಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಕಲಾಧಾರೆ ಟ್ರಸ್ಟ್ ಆರಂಭಿಸಲಾಯಿತು. ಎಲ್ಲರ ಸಹಕಾರದಿಂದ ಪ್ರತಿ ವರ್ಷ ಮಕ್ಕಳಿಗೆ ಹತ್ತು ಹಲವು ವೇದಿಕೆಗಳನ್ನು ಒದಗಿಸಲಾಗುತ್ತಿದೆ ಎಂದರು.
ಸ್ಪರ್ಧೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಉದ್ಘಾಟಿಸಿದರು. ಮೆಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯದರ್ಶಿ ಎಚ್.ಪಿ. ರವಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಭೂಸ್ವಾಧೀನಾಧಿಕಾರಿ ಆರ್.ಮಂಜುನಾಥ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನೃಪತುಂಗ ಕನ್ನಡ ಶಾಲೆ ಕಾರ್ಯದರ್ಶಿ ಸವಿತಾ ಪ.ಮಲ್ಲೇಶ್, ಉಪಾಧ್ಯಕ್ಷ ಸ.ರ.ಸುದರ್ಶನ, ಶ್ರೀ ಮುರುಗನ್ ಮೆಡಿಕಲ್ಲ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಎನ್. ನರೇಂದ್ರ ಬಾಬು ಇತರರಿದ್ದರು.