ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಸಾಂಸ್ಕೃತಿಕ ಕಲಾ ಮೇಳ

CTD KANNADA....
Published on

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉಪ ಯೋಜನೆಯಡಿ ಸಾಹಿತ್ಯ, ಕಲೆ, ಸಂಸ್ಕೃತಿ ಪ್ರೋತ್ಸಾಹಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಮತ್ತು ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದೆ.

ರಾಯಚೂರಲ್ಲಿ ಪರಿಶಿಷ್ಟ ಪಂಗಡ ಮತ್ತು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಕಲಾವಿದರನ್ನು ಒಳಗೊಂಡಂತೆ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂಬ ಚಿಂತನೆಯಿದ್ದರೂ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಲ್ಲಿ ಬುಧವಾರ ನಡೆದ ರಾಯಚೂರು, ಚಿತ್ರದುರ್ಗ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಜಿಲ್ಲಾ ಹಾಗೂ ಇಲಾಖೆ ಅಧಿಕಾರಿಗಳಿದ್ದ ಸಭೆಯಲ್ಲಿ ಎರಡೂ ಕಡೆಯಲ್ಲೂ ಎಸ್‌ಸಿ, ಎಸ್‌ಟಿ ಕಲಾವಿದರನ್ನು ಒಳಗೊಂಡಂತೆ 2 ದಿನಗಳ ಸಾಂಸ್ಕೃತಿಕ ಕಲಾಮೇಳ ಆಯೋಜಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 2 ಕೋಟಿ ರೂ.ಅನುದಾನದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಅನುದಾನದ ಮಿತಿಯೊಳಗೆ ಏರ್ಪಡಿಸುವ ಈ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸುವಂತೆ ಸಚಿವ ತಂಗಡಗಿ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳನ್ನು ಕೋರಿದ್ದಾರೆ. ಪೂರಕ ಸಿದ್ಧತೆಗೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಸೆಪ್ಟೆಂಬರ್ ಮೊದಲವಾರ ರಾಯಚೂರು ಹಾಗೂ 2ನೇವಾರ ಚಿತ್ರದುರ್ಗದಲ್ಲಿ ಆಯೋಜಿಸಲು ತಾತ್ಕಾಲಿಕವಾಗಿ ಯೋಜಿಸಲಾಗಿದೆ. 2 ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜರುಗಲಿರುವ ಜನಪ್ರತಿನಿಧಿಗಳು, ಸಾಹಿತಿ, ಕಲಾವಿದರ, ಅಧಿಕಾರಿಗಳ ಸಭೆಯ ದಿನಾಂಕಗಳನ್ನು ಅಂತಿಮಗೊಳಿಸಬೇಕಿದೆ. ಚಿತ್ರದುರ್ಗದ ತರಾಸು ರಂಗಮಂದಿರ ದುರಸ್ತಿ ಕಾರಣಕ್ಕೆ ಪ್ರತ್ಯೇಕ ಸ್ಥಳ ನಿಗದಿ ಪಡಿಸಬೇಕಿದೆ.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್, ಎನ್.ಎಸ್. ಬೋಸರಾಜು, ಶಾಸಕ ಟಿ. ರಘುಮೂರ್ತಿ, ಎಂಎಲ್‌ಸಿಗಳಾದ ಚಿದಾನಂದಗೌಡ, ಕೆ.ಎಸ್.ನವೀನ್ ಮತ್ತಿತರ ಎರಡು ಜಿಲ್ಲೆಗಳ ನಾನಾ ಶಾಸಕರು, ಅಧಿಕಾರಿಗಳಿದ್ದರು.

ಕಾರ‌್ಯಕ್ರಮಗಳ ಉದ್ಘಾಟನೆಗೆ ಸಿಎಂ?

ರಾಯಚೂರು ಮತ್ತು ಚಿತ್ರದುರ್ಗದ ಕಾರ್ಯಕ್ರಮಗಳ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ಸಭೆಯಲ್ಲಿ ಪ್ರಸ್ತಾಪವಾಗಿದೆ. ಕಾರ್ಯಕ್ರಮಕ್ಕೆ ಸಿಎಂ ಸೇರಿ ಸಂಪುಟ ಸದಸ್ಯರು, ಗಣ್ಯರು ಭಾಗವಹಿಸುವ ಕುರಿತಂತೆ ವಿಶ್ವಾಸ ವ್ಯಕ್ತವಾಗಿದೆ.

ಡಿಸೆಂಬರ್‌ನಲ್ಲಿ ದುರ್ಗೋತ್ಸವ?

ಚಿತ್ರದುರ್ಗದ ಜಿಲ್ಲಾ ಉತ್ಸವ ದುರ್ಗೋತ್ಸವಕ್ಕೆ ಮರು ಚಾಲನೆ ಕೊಡುವ ಕುರಿತಂತೆ ಚರ್ಚೆಯಾಗಿದೆ. ಜಿಲ್ಲಾಡಳಿತದ ಪ್ರಸ್ತಾವನೆ ಕೈ ಸೇರಿದೆ. ಡಿಸೆಂಬರ್ ಅಥವಾ 2026 ರ ಜನವರಿಯಲ್ಲಿ ದುರ್ಗೋತ್ಸವ ಆಚರಿಸಲು ಅಗತ್ಯ ಸಹಕಾರ ನೀಡುವುದಾಗಿ ಸಚಿವ ಶಿವರಾಜ ತಂಗಡಗಿ ಸಭೆಯಲ್ಲಿ ಭರವಸೆ ನೀಡಿದ್ದಾರೆ. 5 ಕೋಟಿ ರೂ. ಅನುದಾನದೊಂದಿಗೆ ಉತ್ಸವಕ್ಕೆ 10 ಕೋಟಿ ರೂ. ಅಗತ್ಯವಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

--------

ಕೋಟ್

ಚಿತ್ರದುರ್ಗದಲ್ಲಿ ಸಾಂಸ್ಕೃತಿಕ ಕಲಾ ಮೇಳ ಆಯೋಜಿಸುವ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ನೇತೃತ್ವದಲ್ಲಿ ಶೀಘ್ರ ನಡೆಸಿ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಬೇಕಿದೆ. ದುರ್ಗೋತ್ಸವಕ್ಕೂ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಡಿ. ವೆಂಕಟೇಶ್, ಜಿಲ್ಲಾಧಿಕಾರಿ, ಚಿತ್ರದುರ್ಗ

-----

ಕೋಟ್

ರಾಜ್ಯದ ಎಲ್ಲ 31 ಜಿಲ್ಲೆಗಳ ಕಲಾವಿದರು, ಸಾಹಿತಿ, ಕವಿಗಳು ಸಾಂಸ್ಕೃತಿಕ ಕಲಾ ಮೇಳದಲ್ಲಿ ಭಾಗವಹಿಸಲಿದ್ದಾರೆ. ಸ್ಥಳೀಯ ಕಲಾವಿದರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಉರುಮೆ, ತಮಟೆ, ಡೊಳ್ಳು, ಅರೆವಾದ್ಯ, ಕಂಸಾಳೆ, ಕರಗ, ಬಯಲಾಟ, ಯಕ್ಷಗಾನ, ರಂಗಗೀತೆ, ನಾಟಕ, ಖಾಸ ಬೇಡರ ಪಡೆ ಮೊದಲಾದ ಪ್ರದರ್ಶನಾತ್ಮಕ ಹಾಗೂ ಬುಡಕಟ್ಟು ಸಂಸ್ಕೃತಿ ಪ್ರತಿಬಿಂಬಿಸುವ ಕಲೆಗಳ ಪ್ರದರ್ಶನದೊಂದಿಗೆ ವಿಚಾರಗೋಷ್ಠಿ, ಕವಿಗೋಷ್ಠಿ ಮತ್ತಿತರ ಪೂರಕ ಕಾರ್ಯಕ್ರಮಗಳಿರುತ್ತವೆ.

ಡಾ. ಬಿ.ಎಂ.ಗುರುನಾಥ್, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿತ್ರದುರ್ಗ.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net