

ಚಿತ್ರದುರ್ಗ: ಜನಾಂದೋಲನಗಳ ಮಹಾಮೈತ್ರಿ, ಜನ ಸಂಗ್ರಾಮ ಪರಿಷತ್ ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ಗಣಿ ಭಾದಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನದ ಉದ್ದೇಶದಿಂದ ಆ.16ರಂದು ಬಳ್ಳಾರಿಯಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ರಾಂತ ನ್ಯಾಯಮೂರ್ತಿ ಸಂತೋಷ್‌ಹೆಗಡೆ ಸಮಾವೇಶ ಉದ್ಘಾಟಿಸಲಿದ್ದಾರೆ. ನಾನಾ ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಜಕಾರಣಿಗಳು, ಅಧಿಕಾರಿಗಳ ಉದ್ಧಟತನದಿಂದ ರಾಜ್ಯದಲ್ಲಿ ನಿರಂತರ ಅಕ್ರಮ ಗಣಿಗಾರಿಕೆ ನಡೆದಿದೆ. ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಅವರ ಉದ್ದಟತನ, ಗಣಿ ಮಾಫಿಯಾದಿಂದ ಪರಿಸರ ಮತ್ತು ಜನ ಜೀವನದ ಮೇಲೆ ದುಷ್ಪರಿಣಾಮವುಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಕ್ರಮ ಗಣಿಗಾರಿಕೆಯಿಂದಾದ ದುಷ್ಪರಿಣಾಮಗಳ ಬಗ್ಗೆ ಸಲ್ಲಿಕೆಯಾದ ವರದಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸೆಂಟ್ರಲ್ ಎಂಪವರ್ ಮೆಂಟ್ ಕಮಿಟಿ ನೇಮಿಸಿತು. ಗಣಿಬಾಧಿತ ಪ್ರದೇಶದ ಪರಿಸರ ಪುನಶ್ಚೇತನ ಯೋಜನೆ ಅನ್ವಯ ವಿಶೇಷ ಆದ್ಯತಾ ನಿಧಿ ಸ್ಥಾಪಿಸುವಂತೆ ಸಿಇಸಿ ಶಿಫಾರಸು ಮಾಡಿತು. ಇದನ್ನು ಸಮ್ಮತಿಸಿ 2013ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದರಿಂದ ಕೆಎಂಇಆರ್‌ಸಿಯಲ್ಲಿ ಸಂಗ್ರಹವಾಗಿರುವ 30 ಸಾವಿರ ಕೋಟಿ ರೂ.ಗಳ ಮೇಲೆ ಅಧಿಕಾರಿ, ರಾಜಕಾರಣಿಗಳ ಕೆಟ್ಟ ದೃಷ್ಟಿ ಬಿದ್ದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಂಡೂರಿನ ದೇವದಾರಿ, ರಾಮಘಡ, ತುಮಕೂರಿನ ಸಾರಂಗಪಾಣಿ ಮತ್ತಿತರೆಡೆ ಲಕ್ಷಾಂತರ ಮರಗಳನ್ನು ಕಡಿದು ಎ,ಬಿ,ಸಿ ವರ್ಗದ 18 ಗಣಿಗಳನ್ನು ಒಟ್ಟುಗೂಡಿಸಿ 3 ಗಣಿ ಬ್ಲಾಕ್ಲ್‌ಗಳನ್ನಾಗಿ ಮಾಡಿ ವಿತರಿಸುವುದನ್ನು ನಿಲ್ಲಿಸಬೇಕು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಖನಿಜ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ರಕ್ಷಿಸಲು ಗಣಿಗಾರಿಕೆಯನ್ನು ವಾರ್ಷಿಕ 20 ಮಿಲಿಯನ್ ಟನ್‌ಗೆ ಮಿತಿಗೊಳಿಸಬೇಕು. ಗಣಿಭಾದಿತ ಜಿಲ್ಲೆಗಳ ಅಭಿವೃದ್ಧಿ ಹಾಗೂ ಜನ ಬದುಕಿನ ಪುನಶ್ಚೇತನಕ್ಕೆ ಗ್ರಾಮ ಸಭೆಗಳಲ್ಲಿ ಜನರ ಅಹವಾಲು ಆಲಿಸಿ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ತಿಳಿಸಿದರು.
ಕೆ.ಬಿ.ಭಟ್, ಜೆ. ಯಾದವರೆಡ್ಡಿ, ಅಭಿರುಚಿ ಗಣೇಶ್, ಕೆ.ಪಿ. ಭೂತಯ್ಯ, ಬಸ್ತಿಹಳ್ಳಿ ಜಿ. ಸುರೇಶ್ ಬಾಬು, ಹಂಪಯ್ಯ ಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಅರುಣ್‌ಕುಮಾರ್ ಇದ್ದರು.
ಕೋಟ್
ಅಕ್ರಮ ಗಣಿಗಾರಿಕೆಯಿಂದ ಹಲವರು ಅಧಿಕಾರ ಕಳೆದುಕೊಂಡಿದ್ದಾರೆ. ಚುನಾವಣಾ ಬಾಂಡ್‌ನಿಂದ ಬಿಜೆಪಿಗೆ ಆರು ಸಾವಿರ ಕೋಟಿ ರೂ.ಬಂದಿದೆ. ಗಣಿಕಾರಿಕೆಗೆ ಸಂಬಂಧಿಸಿದಂತೆ ಮುಂದೆ ಪ್ರಧಾನಿ ನರೇಂದ್ರ ಮೋದಿ ಮತ್ತಿರರು ಅಧಿಕಾರ ಕಳೆದುಕೊಳ್ಳಬಹುದು.
ಎಸ್.ಆರ್. ಹಿರೇಮಠ್, ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ