

ಮಂಡ್ಯ: ಕೆಲ ವರ್ಷದ ಹಿಂದೆ ಬಡವರ ಆಹಾರ ಎನ್ನಿಸಿಕೊಂಡಿದ್ದ ಸಿರಿಧಾನ್ಯ ಭವಿಷ್ಯದಲ್ಲಿ ಬೇಡಿಕೆ ಹೆಚ್ಚಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಡಾ.ರಾಜ್‌ಕುಮಾರ್ ಬಡಾವಣೆ ಪಕ್ಕದ ಮೈದಾನದಲ್ಲಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಮಂತ್ರಾಲಯ, ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರ್ತು ನಿಗಮ ನಿಯಮಿತ, ಕೃಷಿ ವಾಣಿಜ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಿರಿಧಾನ್ಯ ಮೇಳ-ವಸ್ತು ಪ್ರದರ್ಶನ ಹಾಗೂ ಬೆಲ್ಲದ ಪರಿಷೆಗೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಿರಿಧಾನ್ಯವನ್ನು ಶ್ರೀಮಂತರೂ ಉಪಯೋಗಿಸುತ್ತಿದ್ದು, ಅವರ ನೆಚ್ಚಿನ ಆಹಾರವಾಗಿದೆ. ಆದ್ದರಿಂದ ರೈತರು ಸಿರಿಧಾನ್ಯ ಕೃಷಿ ಮಾಡಿ ಸೂಕ್ತ ಬ್ರಾೃಂಡ್ ಮೂಲಕ ಮಾರುಕಟ್ಟೆ ಮಾಡಿದರೆ ಆರ್ಥಿಕವಾಗಿ ಲಾಭ ಗಳಿಸಬಹುದು ಎಂದು ಸಲಹೆ ನೀಡಿದರು.
ನವಣೆ, ಸಾಮೆ, ಬರಗು, ಊದಲು, ಹಾರಕ, ಕೋರಲೆ ಬೆಳೆಗಳನ್ನು ಸಿರಿಧಾನ್ಯಗಳೆಂದು ಕರೆಯಲಾಗುತ್ತದೆ. ಅತಿ ಕಡಿಮೆ ನೀರು ಹಾಗೂ ಗೊಬ್ಬರ ಹಾಕಿ ಫಲವತ್ತಲ್ಲದ ಭೂಮಿಯಲ್ಲೂ ಕೂಡ ಹುಲುಸಾಗಿ ಬೆಳೆಯಬಹುದು. ಇವುಗಳಲ್ಲಿ ಪೌಷ್ಟಿಕಾಂಶ ಹೆಚ್ಚಾಗಿದೆ. ಹಾಗಾಗಿ ನಮ್ಮ ಸರ್ಕಾರ 2016-17ರಲ್ಲಿಯೇ ರೈತಸಿರಿ ಯೋಜನೆ ಆರಂಭಿಸಿತು. ಸಿರಿಧಾನ್ಯಗಳ ಪ್ರೋತ್ಸಾಹಕ್ಕಾಗಿ 15 ರೈತಸಂಘ ಮತ್ತು ಸಿರಿಧಾನ್ಯ ಮಾರಾಟ ಒಕ್ಕೂಟ ರಚಿಸಿ ಸಿರಿಧಾನ್ಯಗಳ ಸಂಗ್ರಹಣೆ, ಸಂಸ್ಕರಣೆ ಹಾಗೂ ಮಾರಾಟಕ್ಕಾಗಿ ಕೆಪೆಕ್ ಸಂಸ್ಥೆಯಿಂದ ಅನುದಾನ ನೀಡಲಾಗಿದೆ ಎಂದರು.
ಮಂಡ್ಯ ಎಂದರೆ ಕಬ್ಬು, ಭತ್ತ ಕೃಷಿಯಾಗಿದೆ. ಆದರೆ ಇದುವರೆಗೆ ಕೃಷಿ ಮಂತ್ರಿ ಸ್ಥಾನ ದೊರಕಿರಲಿಲ್ಲ. ಜಿಲ್ಲೆಯ ಜನರ ಆಶೀರ್ವಾದದಿಂದ ನನಗೆ ಆ ಸ್ಥಾನ ಲಭಿಸಿದೆ. ಹಾಗಾಗಿ ಕೃಷಿ ಇಲಾಖೆಯಿಂದ ಏನೇನು ರೈತಪರ ಕೆಲಸ ಮಾಡಬಹುದೋ ಅದನ್ನು ಅನುಷ್ಠಾನಕ್ಕೆ ತರಲಾಗುವುದು. ಇಲಾಖೆ ವಹಿಸಿಕೊಂಡ ಬಳಿಕ ಜಾಗೃತ ದಳದ ಕಾರ್ಯ ವೈಖರಿಯನ್ನು ಚುರುಕುಗೊಳಿಸಲಾಗಿದೆ. ಜನರ ಆರೋಗ್ಯ ಹಾಗೂ ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜೂನ್‌ನಲ್ಲಿ ಮಳೆ ಬಾರದೆ, ಜುಲೈನಲ್ಲಿ ಶೇ.29ರಷ್ಟು ಅಧಿಕ ಮಳೆ ಬಿದ್ದರೂ ಕೂಡ ಕಳೆದ ನಾಲ್ಕು ವಾರಗಳಿಂದ ಆಗಸ್ಟ್ ತಿಂಗಳಲ್ಲಿ ಮಳೆ ಬಾರದೆ ಒಣಹವೆ ಇರುವುದರಿಂದ ಬಿತ್ತಿದ ಬೆಳೆಗಳು ಕೂಡ ಒಣಗಲು ಪ್ರಾರಂಭಿಸಿವೆ. ರೈತರು ಹೆಚ್ಚು ನೀರು ಬಳಸಿ ಭತ್ತ ಮತ್ತು ಕಬ್ಬನ್ನು ನಾಟಿ ಮಾಡದೆ ಕಡಿಮೆ ನೀರು ಕೇಳುವ ಸಿರಿಧಾನ್ಯಗಳನ್ನು ಬೆಳೆದು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.