ಅ.೬ರವರೆಗೆ ರಾಜ್ಯ ಮಟ್ಟದ ಅಭಿಯಾನ

MDK04
Published on

ಮಡಿಕೇರಿ: ಪ್ರವಾದಿ ಮುಹಮ್ಮದ್‌ರವರ ಮಾನವೀಯ ಶಿಕ್ಷಣಗಳನ್ನು ವ್ಯಾಪಕಗೊಳಿಸಲು, ಅವರ ಜೀವನ ಮತ್ತು ಸಂದೇಶವನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಜಮಾತೆ ಇಸ್ಲಾಮೀ ಹಿಂದ್ ರಾಜ್ಯ ಘಟಕದ ವತಿಯಿಂದ ರಾಜ್ಯ ಮಟ್ಟದ ಅಭಿಯಾನ ಸೆ.೨೮ರಿಂದ ಅ.೬ರವರೆಗೆ ರಾಜ್ಯದಾದ್ಯಂತ ನಡೆಯಲಿದೆ ಎಂದು ಸಮಿತಿಯ ಮೈಸೂರು ವಲಯ ಸಂಚಾಲಕ ಯು.ಅಬ್ದುಸ್ಸಲಾಮ್ ತಿಳಿಸಿದರು.


ಬುದ್ಧ, ಮಹಾವೀರಾ, ವಿವೇಕಾನಂದಾ, ಮಹಾತ್ಮ ಗಾಂಧೀಜಿ, ಪ್ರವಾದಿ ಮಹಮ್ಮದ್‌ರವರು ಮಹಾಪುರುಷರಾಗಿದ್ದು, ಸಮಾಜದ ಆಸ್ತಿಯಾಗಿದ್ದಾರೆ. ಇವರ ತತ್ವ ಆದರ್ಶಗಳನ್ನು ಇಂದಿನ ಯುವಪೀಳೀಗೆ ತಿಳಿದುಕೊಳ್ಳಬೇಕಾಗಿದೆ. ಈ ಹಿನ್ನೆಲೆ ಪ್ರವಾದಿ ಮುಹಮ್ಮದ್‌ರವರ ವಿಚಾರದಾರೆಗಳನ್ನು ತಿಳಿಸುವ ಸಲುವಾಗಿ ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್ ಎಂಬ ಶೀರ್ಷಿಕೆಯಡಿಯಲ್ಲಿ ಸೆ.೨೮ರಿಂದ ಅಭಿಯಾನ ಆರಂಭಗೊಂಡಿದೆ. ಅಭಿಯಾನದಲ್ಲಿ ಪ್ರವಾದಿಗಳ ಕುರಿತ ಪುಸ್ತಕಗಳ ಬಿಡುಗಡೆ, ವಿಚಾರ ಗೋಷ್ಠಿ, ಸಮಾವೇಶಗಳು, ಪ್ರಬಂಧ ಸ್ಪರ್ಧೆ, ರಕ್ತದಾನ ಶಿಬಿರ, ಶಚಿತ್ವ ಅಭಿಯಾನ, ಆಸ್ಪತ್ರೆ-ಅನಾಥಾಲಯ-ವೈದ್ಯಾಶ್ರಮಗಳ ಭೇಟಿ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆಯಂತಹ ಸಮಾಜ ಸೇವಾ ಚಟುವಟಿಕೆಗಳು ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಜಿಲ್ಲಾ ಸಂಚಾಲಕ ಪಿ.ಕೆ.ಅಬ್ದುಲ್ ರೆಹೆಮಾನ್ ಮಾತನಾಡಿ, ಕೊಡಗಿನಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಕಾರ್ಯಕ್ರಮ ನಡೆಸಲಾಗುತ್ತದೆ. ಇಂದು ನಮ್ಮ ಸಮಾಜದಲ್ಲಿ ಪ್ರೀತಿ, ವಿಶ್ವಾಸ ಮತ್ತು ಮಾನವೀಯತೆಯ ಪರವಾಗಿ ಎದ್ದುನಿಲ್ಲಬೇಕಾಗಿದೆ. ಪರಸ್ಪರ ತಪ್ಪು ಕಲ್ಪನೆಗಳು, ಪೂರ್ವಾಗ್ರಹಗಳು, ದ್ವೇಷದ ವಾತಾವರಣವನ್ನು ನಿವಾರಿಸಿ ಶಾಂತಿ, ಸಹಬಾಳೆ, ಪರಸ್ಪರರನ್ನು ಅರಿಯುವಂತಹ ಸದುದ್ದೇಶದಿಂದ ಜಮಾಅತೆ ಇಸ್ಲಾಮೀ ಹಿಂದ್ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಜನತೆ ಸಹಕಾರ ನೀಡುವಂತೆ ಮನವಿ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ಲೇಖಕ ಯೋಗೇಶ್ ಮಾಸ್ಟರ್ ಬರೆದಿರುವ ನನ್ನ ಅರಿವಿನ ಪ್ರವಾದಿ ಪುಸ್ತಕವನ್ನು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಬಿ.ಜಿ.ಅನಂತಶಯನ ಬಿಡುಗಡೆಗೊಳಿಸಿ ಮಾತನಾಡಿ, ಶಾಂತಿ ಮತ್ತು ಸಹಬಾಳ್ವೆ ನಮ್ಮ ಮೂಲ ಮಂತ್ರವಾಗಬೇಕು. ಈ ಹಿನ್ನೆಲೆಯಲ್ಲಿ ಜಮಾತೆ ಇಸ್ಲಾಮೀ ಹಿಂದ್ ರಾಜ್ಯ ಘಟಕದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ. ಎಲ್ಲರಲ್ಲಿಯೂ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಲಿ ಎಂದು ಆಶಿಸಿದರು.


ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಜೆ.ಎಚ್.ಮುಹಮ್ಮದ್ ಹನೀಫ್, ಸಿ.ಎಚ್.ಅಪ್ಸರ್, ಅಬ್ದುಲ್ಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net