ರಾಜ್ಯಮಟ್ಟದ ಬಾಲಕ-ಬಾಲಕಿಯರ ಖೋ ಖೋ ಪಂದ್ಯಾವಳಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಾಲನೆ

WhatsApp Image 2022-11-09 at 5.03.48 PM
ವಿಜಯಪುರ ನಗರದ ಬಿಎಲ್ಡಿಇ ಸಂಸ್ಥೆಯ ಮೆಡಿಕಲ್ ಕಾಲೇಜು ಕ್ರೀಡಾಂಗಣದಲ್ಲಿ ಬುಧವಾರ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬಾಲಕ-ಬಾಲಕಿಯರ ಖೋ ಖೋ ಪಂದ್ಯಾವಳಿ ಕಾರ್ಯಕ್ರಮವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ.ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿ.ಪಂ. ಸಿಇಒ ರಾಹುಲ ಶಿಂಧೆ ಇನ್ನಿತರರಿದ್ದರು.
Published on

ವಿಜಯಪುರ : ವಿಶ್ವದಲ್ಲಿ ಇನ್ನು ಮುಂದೆ ಗ್ರಾಮೀಣ ಕ್ರೀಡೆಗಳಿಗೆ ಮಹತ್ವ ಬರಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಬಿಎಲ್ಡಿಇ ಸಂಸ್ಥೆಯ ಮೆಡಿಕಲ್ ಕಾಲೇಜು ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬಾಲಕ-ಬಾಲಕಿಯರ ಖೋ ಖೋ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು

ಕ್ರಿಕೆಟ್ ಜತೆಗೆ ಕಬಡ್ಡಿ ಮತ್ತು ಖೋ ಖೋ ಸೇರಿದಂತೆ ಭಾರತದ ಗ್ರಾಮೀಣ ಕ್ರೀಡೆಗಳಿಗೆ ಈಗ ಸಾಕಷ್ಟು ಪ್ರೊತ್ಸಾಹ ಸಿಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿವೆ.ಪಿಯುಸಿ ಎಂದರೆ ಕೇವಲ ತರಗತಿಗಳಿಗೆ ಹಾಜರಾಗುವುದು, ಟ್ಯೂಶನ್‌ಗಳಿಗೆ ಹೋಗುವುದು ಮತ್ತು ಶೇ.90 ರಿಂದ ಶೇ. 95ರಷ್ಟು ಅಂಕ ಗಳಿಸುವುದಲ್ಲ. ಮಾನಸಿಕತೆಯ ಜತೆಗೆ ದೈಹಿಕವಾಗಿಯೂ ವಿಕಾಸ ಆಗುವ ಸಮಯ. ಪಾಲಕರು ತಮ್ಮ ಮಕ್ಕಳಿಗೆ ಕೇವಲ ಓದಿನ ಕಡೆಗೆ ಹೆಚ್ಚು ಒತ್ತು ನೀಡದೆ ಅವರಲ್ಲಿರುವ ಕ್ರೀಡಾಸಕ್ತಿಗಳಿಗೂ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಗ್ರಾಮೀಣ ಭಾಗದ ಸದೃಢ ಯುವಕರು ಈಗ ಸೇನೆ ಸೇರಿ ದೇಶ ಸೇವೆ ಮಾಡಲು ಅವಕಾಶ ಒದಗಿಸುತ್ತಿದ್ದಾರೆ. ಸೇನೆಗೆ ಕೇವಲ ಬಡವರು ಮಾತ್ರ ಸೇರುತ್ತಾರೆ. ಅದು ಕೇವಲ ಬಡವರು ಮಾಡುವ ಕೆಲಸ ಎಂದು ಅಪಹಾಸ್ಯ ಮಾಡುವವರಿಗೆ ಈ ಯೋಜನೆ ತಕ್ಕ ಉತ್ತರ ನೀಡುತ್ತಿದೆ. ಇಸ್ರೇಲಿನಲ್ಲಿ ಪ್ರತಿಯಬ್ಬರೂ ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರ ಬೇರೆ ಉದ್ಯೋಗಗಳಲ್ಲಿ ತೊಡಗುತ್ತಾರೆ. ಭಾರತ ಈಗ ಜಗತ್ತಿನಲ್ಲಿ ಆರ್ಥಿಕವಾಗಿ ಬ್ರಿಟನ್‌ನನ್ನು ಹಿಂದಿಕ್ಕಿ ಐದನೇ ಸ್ಥಾನ ಪಡೆದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಮಹಾಭಾರತ ಕಾಲದಿಂದಲೂ ಖೋ ಖೋ ಅಸ್ತಿತ್ವದಲ್ಲಿದೆ. ಕ್ರಿಕೆಟ್ ಜತೆಗೆ ಗ್ರಾಮೀಣ ಕ್ರೀಡೆಗಳಿಗೂ ಆದ್ಯತೆ ನೀಡಬೇಕು. ಗೆಲುವು ಅಥವಾ ಸೋಲಿಗಿಂತ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗಿದೆ. ಪರೀಕ್ಷೆಗಳಲ್ಲಿ ಶೇ. 100 ರಷ್ಟು ಅಂಕ ಗಳಿಸಿದರೂ ಈಗ ಸಿಇಟಿಯಲ್ಲಿ ಉತ್ತಮ ಸಾಧನೆ ಅವಶ್ಯವಾಗಿದೆ. ಕೋಚಿಂಗ್ ಹೆಸರಿನಲ್ಲಿ ಪಾಲಕರು ತಮ್ಮ ಮಕ್ಕಳ ಮೇಲೆ ಮಾನಸಿಕ ಒತ್ತಡ ಹೇರಬಾರದು. ವಿದ್ಯಾಭ್ಯಾಸದ ಜತೆಗೆ ದೈಹಿಕವಾಗಿಯೂ ಸದೃಢರಾಗಿರುವುದು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ

ರಾಜ್ಯದಲ್ಲಿ ಒಟ್ಟು 5361 ಪಿಯು ಕಾಲೇಜುಗಳಿವೆ. ಆದರೆ, ಕೇವಲ 461 ಜನ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ. 1203 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕೇವಲ ಓರ್ವ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ. ಹೀಗಾಗಿ ಕ್ರೀಡಾಪಟುಗಳಿಗೆ ಸೂಕ್ತ ತರಬೇತುದಾರರು ಸಿಗುತ್ತಿಲ್ಲ. ಇದು ಕ್ರೀಡಾಪಟುಗಳ ಸಾಧನೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾಹಿತಿ ನೀಡಿದರು. ಪ್ರಧಾನಿ ಮೋದಿ ಅವರು 2018-19ರಲ್ಲಿ ಖೇಲೋ ಇಂಡಿಯಾ ಯೋಜನೆ ಜಾರಿಗೆ ತಂದಿದ್ದಾರೆ. ಅದರಿಂದ ಯುವಪೀಳಿಗೆಗೆ ಸಹಕಾರಿ ಆಗಿದೆ ಎಂದರು.

ವೈಯಕ್ತಿಕ ಧನಸಹಾಯದ ಭರವಸೆ

ನಮ್ಮ ಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸುತ್ತಿದ್ದೇವೆ. ಚಕ್ಕಡಿ ಓಟ ಸಂಘಟಿಸುತ್ತಿದ್ದೇವೆ ಪ್ರಾಣಿಗಳಿಗೆ ಹಿಂಸೆಯಾಗದಂತೆ ಆಯೋಜಿಸುತ್ತಿದ್ದೇವೆ. ಈ ಕ್ರೀಡಾಕೂಟದಲ್ಲಿ ವಿಜೇತರಿಗೆ ಪ್ರೋತ್ಸಾಹ ನೀಡಲು ತಾವು ವೈಯಕ್ತಿಕವಾಗಿ ಧನ ಸಹಾಯ ಮಾಡುವುದಾಗಿಯೂ ಎಂಎಲ್‌ಸಿ ಪ್ರಕಾಶ ಹುಕ್ಕೆರಿ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ.ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿ.ಪಂ. ಸಿಇಒ ರಾಹುಲ ಶಿಂಧೆ, ಪಿಯು ಇಲಾಖೆ ಉಪ ನಿರ್ದೇಶಕ ಎಸ್. ಎನ್. ಬಗಲಿ, ಬಿ ಎಲ್‌ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಆರ್.ಬಿ.ಕೊಟ್ನಾಳ, ಆಡಳಿತಾಧಿಕಾರಿ ಬಿ.ಆರ್.ಪಾಟೀಲ, ದೈಹಿಕ ನಿರ್ದೇಶಕ ಎಸ್. ಎಸ್. ಕೋರಿ, ಬಿಎಲ್ಡಿಇ ಸಂಸ್ಥೆಯ ಆಡಳಿತಾಧಿಕಾರಿ ಐ.ಎಸ್. ಕಾಳಪ್ಪನವರ, ಎಸ್. ಎಸ್. ಪದವಿ ಕಾಲೇಜಿನ ಪ್ರಾಚಾರ್ಯ ಗಿರೀಶ ಅಕಮಂಚಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net