

ಕಾರವಾರ: ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಭಟ್ಕಳದ ಶ್ರೀಧರ ಶೇಟ್ ಹಾಗೂ ಹೊನ್ನಾವರದ ಪಿ.ಆರ್.ನಾಯ್ಕ ಅವರು ಬೆಂಗಳೂರಿನಲ್ಲಿ ಸೆ.5 ರಂದು ಆಯೋಜಿಸಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಭಟ್ಕಳ ತಾಲೂಕಿನ ಜಾಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶ್ರೀಧರ ಶೇಟ್ ಶಿರಾಲಿ ಇವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಅವರು ಉತ್ತಮ ಶಿಕ್ಷಕರಾಗಿ ಅಷ್ಟೇ ಅಲ್ಲದೆ ಕವಿ, ಲೇಖಕ, ಅಂಕಣಕಾರ,ಉತ್ತಮ ಚಿತ್ರ ಕಲಾವಿದ, ವಾಗ್ಮಿ,ವ್ಯಂಗ್ಯಚಿತ್ರಕಾರ,ಕಾರ್ಯಕ್ರಮ ನಿರೂಪಕ,ಸಂಘಟನಾಕಾರ,ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ, ಸಂಪನ್ಮೂಲ ವ್ಯಕ್ತಿ ಹೀಗೆ ಬಹುಮುಖ ಪ್ರತಿಭೆಯ ಸಂಗಮವಾಗಿ ಜನಮನ್ನಣೆ ಗಳಿಸಿದ್ದಾರೆ. 1992 ರ ನವೆಂಬರ್ 6ರಂದು ಉ.ಕ ಜಿಲ್ಲೆಯ ಸಿದ್ಧಾಪುರ ತಾಲೂಕಿನ ವಂದಾನೆ ಗ್ರಾಮದ ಶಿರೂರಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿಗೆ ಸೇರಿ, ನಂತರ ಭಟ್ಕಳ ತಾಲೂಕಿನ ಬೈಲೂರು ಈಗರ್ಜಿ ಮತ್ತು ತಟ್ಟಿಹಕ್ಕಲ್ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಒಟ್ಟು ಹದಿನೆಂಟು ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಬಳಿಕ 2010ರ ಅಕ್ಟೋಬರ್ 28 ರಂದು ಆಂಗ್ಲ ಭಾಷಾ ಶಿಕ್ಷಕರಾಗಿ ಭಡ್ತಿ ಪಡೆದು ಭಟ್ಕಳ ತಾಲೂಕಿನ ಬೆಳಕೆ ಪ್ರೌಢಶಾಲೆಯಲ್ಲಿ ಸೇವೆ ಆರಂಭಿಸಿ,ಪ್ರೌಢಶಾಲಾ ಶಿಕ್ಷಕರಾಗಿ ಹದಿನೈದು ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಜಾಲಿ ಪ್ರೌಢಶಾಲೆಯಲ್ಲಿ ಸೇವೆಸಲ್ಲಿಸುತ್ತಿದ್ದು,ಒಟ್ಟು 33 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ನಿರಂತರ ಎಂಟು ವರ್ಷಗಳಿಂದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ ತರುವಲ್ಲಿ ಇವರ ಶ್ರಮವಿದೆ. ಎರಡು ಬಾರಿ ಧಾರವಾಡದ ಡಾ.ಎಚ್.ಎಫ್.ಕಟ್ಟೀಮನಿ ಪ್ರತಿಷ್ಠಾನದ ಶಿಕ್ಷಕ ಪರಿಶ್ರಮ ಹಿರಿಮೆಗೆ ಗೌರವ ಪ್ರಶಸ್ತಿಯಿಂದ ಪುರಸ್ಕರಿಸಲ್ಪಟ್ಟಿದ್ದಾರೆ. ಡಿ ಎಸ್ ಇ ಆರ್ ಟಿ ವತಿಯಿಂದ ಚೈತನ್ಯ ತರಣಿ -ಬೋಧನೋಪಕರಣಗಳ ತರಬೇತಿಯ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಬೀದರ್, ಬಳ್ಳಾರಿ, ರಾಯಚೂರು ಮತ್ತು ಗುಲ್ಬರ್ಗಾ ಜಿಲ್ಲೆಗಳ ಶಿಕ್ಷಕರಿಗೆ ಟಿ.ಎಲ್.ಎಂ ತರಬೇತಿಯನ್ನು ಯಶಸ್ವಿಯಾಗಿ ನೀಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮೆರೆದು ಹಸಿವು ಸಾಯುವುದಿಲ್ಲ, ಬೇಲಿಯ ಹೂವು, ಬೆರಳ ಸಂಧಿಯಿAದ, ಕಾವ್ಯ ಜ್ಯೋತಿ ಇತ್ಯಾದಿ ಕವನ ಸಂಕಲಗಳು ಸೇರಿದಂತೆ ಒಟ್ಟು ಏಳು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅತ್ಯುತ್ತಮ ಚಿತ್ರಕಲಾವಿದರಾಗಿರುವ ಶ್ರೀಧರ ಶೇಟ್ ರವರು ವ್ಯಂಗ್ಯ ಚಿತ್ರಕಾರರಾಗಿಯೂ ಜನಪ್ರಿಯತೆ ಗಳಿಸಿದ್ದಾರೆ. ಜಲವರ್ಣದಲ್ಲಿ ಪಳಗಿರುವ ಅವರು ಹಲವಾರು ಕಲಾಕೃತಿಗಳನ್ನು ರಚಿಸಿದ್ದು, ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರದರ್ಶನಗೊಂಡಿವೆ. ಕಾರವಾರ ಆಕಾಶವಾಣಿ ಮತ್ತು ಬೆಂಗಳೂರು ದೂರದರ್ಶನದಲ್ಲಿ ಶೈಕ್ಷಣಿಕ ಹಾಗೂ ಸಾಹಿತ್ಯಕ ಕ್ಷೇತ್ರಗಳಿಗೆ ಸಂಬAಧಿಸಿದAತೆ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಉದಯ ಟಿವಿ'ಯ ಆದರ್ಶ ದಂಪತಿಗಳು ಕಾರ್ಯಕ್ರಮದಲ್ಲಿ ತಮ್ಮ ಸಮಯೋಚಿತ ಕ್ರಿಯಾಶೀಲತೆಯಿಂದಾಗಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಅತ್ಯುತ್ತಮ ವಾಗ್ಮಿಯೆಂದು ಗುರುತಿಸಲ್ಪಟ್ಟು, ಶೈಕ್ಷಣಿಕ, ಸಾಹಿತ್ಯಕ,ವ್ಯಕ್ತಿತ್ವ ವಿಕಸನ ಮತ್ತು ಸಾಂಸ್ಕೃತಿಕ ವಿಷಯಗಳ ಮೇಲೆ ನಿರರ್ಗಳವಾಗಿ ಮಾತನಾಡುವ ಹವ್ಯಾಸ ಹೊಂದಿದ್ದಾರೆ. ಶಿರಾಲಿಯ ಗುರು ನಮನ ಬಳಗದ ಅಧ್ಯಕ್ಷರಾಗಿ ತಮಗೆ ಪ್ರೌಢಶಾಲೆಯಲ್ಲಿ ಕಲಿಸಿದ ಶಿಕ್ಷಕರ ನೆನಪಿನಲ್ಲಿ ಪ್ರತಿ ವರ್ಷ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದ್ದಾರೆ ರಾಜ್ಯಮಟ್ಟದ "ಸತ್ಸಂಗ ರತ್ನ" ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದಾರೆ.ಅಷ್ಟೆ ಅಲ್ಲದೆ ನೂರಾರು ಸಂಘಟನೆಗಳು ಶ್ರೀಧರ ಶೇಟ್ ಶಿರಾಲಿಯವರನ್ನು ಸನ್ಮಾನಿಸಿ ಗೌರವಿಸಿವೆ.
ವೈವಿಧ್ಯಮಯ ಕಾರ್ಯ ಯೋಜನೆ ರೂಪಿಸಿ ಮಕ್ಕಳ ಗುಣಾತ್ಮಕ ಕಲಿಕೆಗೆ ಹಲವು ನಾವಿನ್ಯಯುತ ಚಟುವಟಿಕೆ ರೂಪಿಸಿ ನಾಡಿನ ಗಮನ ಸೆಳೆದ ಶಿಕ್ಷಕ ಪಿ.ಆರ್.ನಾಯ್ಕ ಅವರಿಗೆ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ. ನಲಿ- ಕಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಆಯೋಜಿಸಿದ ವಿದ್ಯಾ ಪ್ರವೇಶ ಕಲಿಕೆಗೆ ವಿಶೇಷ ಕಾರ್ಯ ಯೋಜನೆ ರೂಪಿಸಿ ಕಲಿಕೆಯಲ್ಲಿ ಪಾಠ ನಾಟಕ ಅಳವಡಿಸಿದ ಜಿಲ್ಲೆಯ ಏಕಮೇವ ಶಿಕ್ಷಕ ಎನ್ನುವ ಹೆಗ್ಗಳಿಕೆ ಇವರಿದ್ದಾಗಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗೆ ತಂಡ ರಚಿಸಿ ಪಾಲಕರ ಮನವೊಲಿಸಿ ಮಕ್ಕಳನ್ನು ಪುನಃ ಶಾಲೆಗೆ ತರಲು "ಚಿಣ್ಣರ ಚಿತ್ತಾರ" ಕಾರ್ಯಕ್ರಮ ಆಯೋಜಿಸಿರುತ್ತಾರೆ. "ಜಗುಲಿಯ ಮೇಲಿನ ಸಾಧಕರು" ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸ್ಥಳೀಯ ಪ್ರತಿಭೆಗಳನ್ನು, ಸಾಧಕರನ್ನು, ಸಾಹಿತಿಗಳನ್ನು ಪರಿಚಯಿಸುವ ಕಾರ್ಯವನ್ನು ಸಂಘಟಿಸಿರುತ್ತಾರೆ. `ತಣ್ಣೀರು' ನಾಟಕ ರಚಿಸಿ, ಮಕ್ಕಳಿಂದ ಪ್ರದರ್ಶಿಸಿ ಪಾಲಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ರೂಢಿಸಲು `ಶಾಲೆಗಳತ್ತ ಸಾಹಿತಿಗಳು' ಎಂಬ ಶಿರೋನಾಮದಡಿಯಲ್ಲಿ ಅನೇಕ ಸಾಹಿತಿಗಳನ್ನು ಶಾಲೆಗೆ ಕರೆಸಿ ಉಪನ್ಯಾಸ, ಕಾರ್ಯಾಗಾರ, ಕಥೆ- ಕಾವ್ಯ ಕಟ್ಟುವ ಪ್ರಾತ್ಯಕ್ಷಿಕೆ ನಡೆಸಿ ಮಕ್ಕಳ ಸಾಹಿತ್ಯಾ ಶಕ್ತಿಗೆ ಪ್ರೇರೇಪಿಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಳೆದ 32 ವರ್ಷಗಳಿಂದ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಅವರು ಪ್ರಸ್ತುತ ಹೊನ್ನಾವರ ನಂ.2 ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪಿ.ಆರ್.ನಾಯ್ಕ ಅವರು ತಿಮ್ಮು, ಗುಲಗುಂಜಿ, ತಣ್ಣೀರು, ಡಾಕ್ಟರ್ ಮಾಮಾ, ನಮ್ಮವರು ನಮ್ಮ ಜನಾಂಗ, ಭಾವಾಭಿನಂದನೆ, ಪ್ರತಿಭಾ ಸಂಪನ್ನ, ದೇವಗಿರಿ, ಪಾಟಿಚೀಲ, ಅಕ್ಷರ ಸಂಗಾತಿ, ಜಿಲ್ಲೆಯ ಜನಪದ ಕಲೆ, ನಮ್ ಕಥೆ, ನಮ್ಮ ವ್ಯಥೆ ಮುಂತಾದ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. `ಪಾಟಿಚೀಲ' ಮಕ್ಕಳ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಪರಿಷತ್ತಿನಿಂದ ಶಿಶು ಸಂಗಮೇಶ ದತ್ತಿ ಪುರಸ್ಕಾರ ಲಭಿಸಿದೆ. ಭಟ್ಕಳ ತಾಲೂಕಾ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ, ರಾಜ್ಯಮಟ್ಟದ ಗುರು ಶ್ರೀ, ವಿಜ್ಞಾನ ಮಿತ್ರ ಪ್ರಶಸ್ತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಇವರ ಮುಡಿಗೇರಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ನೇಮಕರಾಗಿದ್ದಾರೆ.
ಮಕ್ಕಳ ಗುಣಮಟ್ಟದ ಕಲಿಕೆಗೆ ಮೊದಲ ಪ್ರಾಶಸ್ತ್ಯ ನೀಡಿ ಅವರಲ್ಲಿರುವ ಸುಪ್ತ ಪ್ರತಿಭೆಗೆ ಅವಕಾಶ ಕಲ್ಪಿಸುವ ಚಿಣ್ಣರ ಚಿತ್ತಾರ, ಶಿಕ್ಷಣದಲ್ಲಿ ರಂಗಕಲೆ, ಬೇಸಿಗೆ ಶಿಬಿರ, ಪರಿಸರದ ಸುತ್ತ ಒಂದು ಸುತ್ತು, ಶರಾವತಿಯಲ್ಲೊಂದು ಜೀವ ವೈವಿಧ್ಯ ಪರಿಚಯ ಪಯಣ, ಕೂಲಿಯಿಂದ ಶಾಲೆಗೆ, ಬಾ ಬಾಲೆ ಶಾಲೆಗೆ, ಸಾಹಿತಿಗಳ ಚಿತ್ತ ಶಾಲೆಯುತ್ತ, ಕಥಾ- ಕಾವ್ಯ ಕಮ್ಮಟ, ಜಗುಲಿಯ ಮೇಲಿನ ಸಾಧಕರು ಮುಂತಾದ ಕಾರ್ಯಕ್ರಮಗಳಿಗೆ ವೇದಿಕೆ ಸಂಘಟಿಸಿ ಮಕ್ಕಳ ಪ್ರತಿಭೆಗೆ ಸಾಣೆ ಹಿಡಿದ ಪ್ರಯೋಗಶೀಲ ವ್ಯಕ್ತಿತ್ವದ ಪಿ.ಆರ್.ನಾಯ್ಕರಿಗೆ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದಕ್ಕೆ ಶಿಕ್ಷಕ ಸಮುದಾಯ ಹರ್ಷ ವ್ಯಕ್ತಪಡಿಸಿದೆ.