

ಕಾರವಾರ: ಜಿಲ್ಲೆಯ ಮೂವರು ಶಿಕ್ಷಕರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರೌಢಶಾಲಾ ವಿಭಾಗದಲ್ಲಿ ಕುಮಟಾ ಹಿರೇಗುತ್ತಿಯ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಮಹಾದೇವ ಬೊಮ್ಮು ಗೌಡ, ಭಟ್ಕಳ ಬೆಳಕೆ ಹೊನ್ನೆಮಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಘವೇಂದ್ರ ಎಸ್.ಮಡಿವಾಳ, ಶಿರಸಿ ಶೈಕ್ಷಣಿಕ ಜಿಲ್ಲೆಯ ಮುಂಡಗೋಡ ತಾಲೂಕಿನ ಜೋಗೇಶ್ವರ ಹಳ್ಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಾಮಚಂದ್ರ ಶೇಷಾಜಪ್ಪಾ ಕಲಾಲ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಅವರಿಗೆ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ತಲಾ 25 ಸಾವಿರ ರೂ. ಹಾಗೂ ಫಲಕ ನೀಡಿ ಗೌರವಿಸಲಾಗುವುದು.
ಅಂಕೋಲಾದ ಬೆಳಂಬಾರದ ಖ್ಯಾತ ನಾಟಿ ವೈದ್ಯ ಬೊಮ್ಮು ಗೌಡರ ಕುಟುಂಬದವರಾದ ಮಹಾದೇವ ಗೌಡ ಅವರು ಗಣಿತ ವಿಜ್ಞಾನ ಮಾದರಿಗಳನ್ನು ತಯಾರಿಸುವಲ್ಲಿ ಪ್ರಸಿದ್ಧರು. ಅವರ ಮಾರ್ಗದರ್ಶನದಲ್ಲಿ ಮಕ್ಕಳು ತಯಾರಿಸಿದ ಮಾದರಿಯಗಳು ರಾಷ್ಟç ಮಟ್ಟದ ಪ್ರಶಸ್ತಿ ಪಡೆದಿವೆ. ಕೋವಿಡ್ ಸಮಯದಲ್ಲಿ ಸ್ಯಾನಿಟೈಸರ್ ಬಳಕೆಗೆ ಕಾಲಿನಿಂದ ಒತ್ತುವ ಸಾಧನ. ಪರಿಸರ ಪೂರಕ ಒಲೆ ಮುಂತಾದ ವಿಜ್ಞಾನ ಉಪಕರಣಗಳು ತುಂಬಾ ಪ್ರಸಿದ್ಧವಾಗಿದ್ದವು.
ಮುಂಡಗೋಡು ಮೂಲದ ರಾಮಚಂದ್ರ ಕಲಾಲ ಅವರು ಪ್ರಸಿದ್ಧ ಜಲ ವರ್ಣ ಚಿತ್ರ ಕಲಾವಿದರು. ಬೆಂಗಳೂರು ವೆಂಕಟಪ್ಪ ಆರ್ಟ್ ಗ್ಯಾಲರಿ, ಮೈಸೂರು ದಸರಾ ಸೇರಿ ರಾಜ್ಯದ ವಿವಿಧೆಡೆ ಇವರ ಚಿತ್ರಗಳು ಪ್ರದರ್ಶನಗೊಂಡಿವೆ. ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಚಿತ್ರಕಲೆಯನ್ನು ತಮ್ಮ ಶಿಕ್ಷಕ ವೃತ್ತಿಯಲ್ಲೂ ಅಳವಿಡಿಕೊಂಡ ಅವರು ಮಕ್ಕಳಿಗೆ ಅರ್ಥವಾಗುವಂತೆ ಕಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಸ್ತೆ, ವಿದ್ಯುತ್ ಇಲ್ಲದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 8 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ ರಾಘವೇಂದ್ರ ಎಸ್.ಮಡಿವಾಳ ಅವರು ಕೆಲ ವರ್ಷ ಬಿಆರ್‌ಪಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಅವರು ಕಲಿಸುತ್ತಿರುವ ಮಕ್ಕಳನ್ನು ದೈಹಿಕ ಶಿಕ್ಷಣದಲ್ಲಿ ಪ್ರೇರೇಪಿಸಿ ಪ್ರಶಸ್ತಿ ಪಡೆಯುವಂತೆ ಮಾಡುವುದು, ಮಾರ್ಗದರ್ಶನ ನೀಡಿ ಪ್ರತಿಭಾ ಕಾರಂಜಿಯಲ್ಲಿ ಸಾಕಷ್ಟು ಪ್ರಶಸ್ತಿ ಪಡೆಯುವಂತೆ ಮಾಡುತ್ತಿದ್ದಾರೆ.