

ಸುಳ್ಯ: ದ.ಕ.ಜಿ.ಪಂ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರಿಗೆ ಮಲೆನಾಡ ಗಾಂಧಿ ಗೋವಿಂದೇ ಗೌಡ ಅವರ ಹೆಸರಿನಲ್ಲಿ ನೀಡುವ ರಾಜ್ಯಮಟ್ಟದ ಅತ್ಯುತ್ತಮ ಶಾಲಾ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಸಂಭ್ರಮಾಚರಣೆ ನಡೆಯಿತು.
ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಎಸ್‌ಡಿಎಂಸಿ ಪದಾಧಿಕಾರಿಗಳು, ಊರವರು, ಸುಳ್ಯದ ಶಿಕ್ಷಣ ಪ್ರೇಮಿಗಳು ಸೇರಿ ಸುಳ್ಯದ ಜ್ಯೋತಿ ವೃತ್ತದಿಂದ ಗಾಂಧಿನಗರದವರೆಗೆ ಮೆರವಣಿಗೆ ನಡೆಸಿದರು.
ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ ಕನ್ನಡದ ಧ್ವಜ ಬೀಸುವುದರ ಮೆರವಣಿಗೆಗೆ ಚಾಲನೆ ನೀಡಿದರು ನಗರ ಪಂಚಾಯಿತಿ ಉಪಾಧ್ಯಕ್ಷ ಬುದ್ಧ ನಾಯ್ಕ, ಐಎಂಎ ಅಧ್ಯಕ್ಷೆ ಡಾ.ವೀಣಾ, ಅಕ್ಷರ ದಾಸೋಹ ಅಧಿಕಾರಿ ವೀಣಾ ಸತೀಶ್ ಕೊಯಿಂಗಾಜೆ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಜಯನಗರ ಮೊದಲಾದವರು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಯುವಜನ ಸಂಯುಕ್ತ ಮಂಡಳಿ ವತಿಯಿಂದ ಮುಖ್ಯಶಿಕ್ಷಕ, ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರಿಗೆ ಗೌರವ ಸಲ್ಲಿಸಲಾಯಿತು. ಮೆರವಣಿಗೆ ನಡೆಸಿದ ಬಳಿಕ ಕೋಲ್ಚಾರು ಶಾಲಾ ಪ್ರಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.