ಕೊಡಗಿನ ವಿವಿಧ ಶಿಕ್ಷಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ

MDK02
Published on

ಮಡಿಕೇರಿ: ಬೆಂಗಳೂರಿನ ಶಿಕ್ಷಣ ಜ್ಞಾನ ಮಾಸ ಪತ್ರಿಕೆಯ ೨೧ನೇ ವಾರ್ಷಿಕೋತ್ಸವದ ಪ್ರಯುಕ್ತ ನೀಡಲಾಗುವ ರಾಜ್ಯಮಟ್ಟದ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾದ ಕೊಡಗು ಜಿಲ್ಲೆಯ ವಿವಿಧ ಶಿಕ್ಷಕರಿಗೆ ಶಿವಮೊಗ್ಗದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.


ಕಾಲೇಜು ವಿಭಾಗದಲ್ಲಿ ಮಡಿಕೇರಿಯ ಸಂತಜೋಸೇಫರ ಕಾಲೇಜಿನ ಉಪನ್ಯಾಸಕಿ ಕೆ.ಕೆ.ಜಯಲಕ್ಷ್ಮಿ ಕುಮಾರ್‌ರವರಿಗೆ ಜ್ಞಾನ ಸಂಜೀವಿನಿ ಪ್ರಶಸ್ತಿ, ಅತ್ಯುತ್ತಮ ಶಾಲೆಯಾಗಿ ಮಡಿಕೇರಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹಾಕತ್ತೂರು ಸರ್ಕಾರಿ ಶಾಲೆ ಆಯ್ಕೆ ಆಗಿದ್ದು ಶಾಲೆಯ ಮುಖ್ಯ ಶಿಕ್ಷಕಿ ಬಿ.ಎಸ್.ನೀತಕುಮಾರಿ ಪ್ರಶಸ್ತಿ ಪಡೆದಿದ್ದಾರೆ.


ಗೋಣಿಕೊಪ್ಪದ ಹರಿಶ್ಚಂದ್ರಪುರ ವಿಭಾಗದ ಅಂಗನವಾಡಿ ಶಿಕ್ಷಕಿ ಆರ್.ಲತಾ ಅವರಿಗೆ ಜ್ಞಾನ ಚಿಗುರು ಕವಚ ಪ್ರಶಸ್ತಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಪೊನ್ನಂಪೇಟೆ ಕ್ಲಸ್ಟರ್‌ನ ನಿಯೋಜಿತ ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಡ ಜೀವನ್‌ರವರಿಗೆ ಜ್ಞಾನ ಜ್ಯೋತಿ ಪ್ರಶಸ್ತಿ, ಶಿರಂಗಾಲದ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಆರ್.ಡಿ.ಲೋಕೇಶ್‌ರವರಿಗೆ ಜ್ಞಾನ ಸಿಂಧು ಪ್ರಶಸ್ತಿ ಪಡೆದುಕೊಂಡರು.


ಅನುದಾನಿತ ಪ್ರೌಢ ಶಾಲೆ ಗೋಣಿಕೊಪ್ಪದಲ್ಲಿ ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಮತ್ತು ವಿವಿಧ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ವಿಜ್ಞಾನ ಶಿಕ್ಷಕ, ರಾಜ್ಯ ಮಟ್ಟದ ಪ್ರಶಸ್ತಿ ವಿಜೇತರು ಆಗಿರುವ ಶ್ರೀಕೃಷ್ಣ ಚೈತನ್ಯ ಅವರಿಗೆ ಬಹುಮುಖ ಪ್ರತಿಭೆ ಪ್ರಶಸ್ತಿ ಸಂದಿದೆ. ಈ ಪ್ರಶಸ್ತಿಗಳನ್ನು ಬಿ.ಎಸ್.ಯಡಿಯೂರಪ್ಪ ಅವರಿಗೆ ೮೦ನೇ ವರ್ಷದ ಅಭಿನಂದನೆ ಕಾರ್ಯಕ್ರಮ ಹಾಗೂ ಶಿಕ್ಷಣ ಜ್ಞಾನ ಪತ್ರಿಕೆಯ ೨೧ನೇ ವಾರ್ಷಿಕೋತ್ಸವದ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಸಂದರ್ಭ ಶಿವಮೊಗ್ಗ ಜಿಲ್ಲೆಯ ಬೆಕ್ಕಿನ ಕಲ್ಮಠದಲ್ಲಿ ಭಾನುವಾರ ನೀಡಲಾಯಿತು.


ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಶಿಕ್ಷಕ ಮೈಸೂರಿನ ಲಯನ್ ಗಂಗಾಧರಪ್ಪ, ಶಿಕ್ಷಣ ಜ್ಞಾನ ಪತ್ರಿಕೆ ಸಂಪಾದಕ ನಾಗರಾಜು, ಶಾಸಕ ಎಸ್.ಎನ್.ಚನ್ನಬಸಪ್ಪ, ಜೂನಿಯರ್ ವಿಷ್ಣುವರ್ಧನ್ ಖ್ಯಾತಿಯ ಅಪೇಕ್ಷ ಮಂಜುನಾಥ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net