

ಹನಗೋಡು : ಹಾಸನದಲ್ಲಿ ಬುಧವಾರ ನಡೆದ ವಿಭಾಗೀಯ ಮಟ್ಟದ 14 ವರ್ಷದೊಳಗಿನ ಹಿರಿಯ ಪ್ರಾಥಮಿಕ ಶಾಲಾ ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾವಳಿಯಲ್ಲಿ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ನಾಗಾಪುರ ಗಿರಿಜನ ಆಶ್ರಮ ಶಾಲಾ ಮಕ್ಕಳು ಪ್ರತಿಷ್ಠಿತ ತಂಡಗಳನ್ನು ಸೋಲಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಮೈಸೂರು ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದ ಈ ತಂಡವು ಮೊದಲಿಗೆ ಚಿಕ್ಕಮಗಳೂರು ಜಿಲ್ಲಾ ತಂಡವನ್ನು 2-0 ನೇರ ಸೆಟ್ ಮೂಲಕ, ಸೆಮಿ ಫೈನಲ್‌ನಲ್ಲಿ ಉಡುಪಿ ಜಿಲ್ಲಾ ತಂಡವನ್ನು 2-0 ನೇರ ಸೆಟ್ ಮೂಲಕ ಜಯಗಳಿಸಿತು. ರೋಚಕ ಹಣಾಹಣಿಯ ಫೈನಲ್ ಪಂದ್ಯದಲ್ಲಿ ಹಾಸನ ಜಿಲ್ಲಾ ತಂಡವನ್ನು 2-1 ಅಂತರದಲ್ಲಿ ಸೋಲಿಸಿತು. ಎರಡು ತಂಡಗಳು ತಲಾ ಒಂದು ಸೆಟ್ ಗೆಲುವು ಸಾಧಿಸಿದ ಹಿನ್ನೆಲಯಲ್ಲಿ ಕೊನೆಯ ಸೆಟ್‌ನಲ್ಲಿ 15-4 ಅಂಕಗಳ ಅಂತರದಲ್ಲಿ ಸೋಲಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಯಿತು.
ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇರಲಿಲ್ಲ. ಗ್ರಾಮದ ಟ್ಯಾಲೆಂಟ್‌ಮಹದೇವ್, ಶಾಲೆಯ ಶಿಕ್ಷಕ ಜಲೇಂದ್ರ ಮಕ್ಕಳಿಗೆ ತರಬೇತಿ ನೀಡಿದ ಹಿನ್ನೆಲೆಯಲ್ಲಿ ಈ ಸಾಧನೆ ಸಾಧ್ಯವಾಯಿತೆಂದು ಮುಖ್ಯ ಶಿಕ್ಷಕ ಲಕ್ಷ್ಮಣ್ ಸಂತಸ ಹಂಚಿಕೊಂಡಿದ್ದಾರೆ. ಬರಿಗಾಲಿನಲ್ಲಿ ರೋಚಕ ಆಟವಾಡಿದ ಆದಿವಾಸಿ ಮಕ್ಕಳ ಚಾಕಚಕ್ಯತೆಗೆ ಮನಸೋತ ಕ್ರೀಡಾ ವೀಕ್ಷಕರು ಹಾಗೂ ಕ್ರೀಡಾ ಪ್ರೇಮಿಗಳು ಆದಿವಾಸಿ ಮಕ್ಕಳನ್ನು ಬೆಂಬಲಿಸಿದರು. ಹಾಸನ ತಾಪಂನ ಇಒ ಗಿರೀಶ್ ಪಂದ್ಯಾವಳಿ ವೀಕ್ಷಿಸಿ ಮಕ್ಕಳ ಆಟಕ್ಕೆ ಮನಸೋತ ವೈಯಕ್ತಿಕವಾಗಿ ನಗದು ಬಹುಮಾನ ನೀಡಿದರು.