

ಮೈಸೂರು: ಕಲಾಮಂದಿರದ ಅಂಗಳದಲ್ಲಿ ಏಕಕಾಲಕ್ಕೆ ಹುಲಿ, ಚಿರತೆ, ಆನೆ, ಸಿಂಹ ಸೇರಿದಂತೆ ವಿವಿಧ ಪ್ರಾಣಿಗಳು ಸಂಚಾರ ಮಾಡಿದವು. ಜತೆಗೆ, ವಿಜ್ಞಾನ-ತಂತ್ರಜ್ಞಾನದ ಸಾಧನೆಗಳು ಮತ್ತು ಪಾರಂಪರಿಕ ತಾಣಗಳೂ ಸೃಷ್ಟಿಯಾದವು…!
ಆಶ್ಚರ್ಯಪಡಬೇಡಿ, ಇವುಗಳು ನೈಜವಲ್ಲ. ಚಿಣ್ಣರ ಕೈಚಳಕದಲ್ಲಿ ಅರಳಿದ ಚಿತ್ರಕಲಾಕೃತಿಗಳು. ಇದಕ್ಕೆ ವೇದಿಕೆಯಾಗಿದ್ದು ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ.
ದಸರಾ ಮಹೋತ್ಸವದ ಅಂಗವಾಗಿ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿಯ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ನೆಚ್ಚಿನ ಪ್ರಾಣಿ-ಪಕ್ಷಿಗಳು, ವಿಜ್ಞಾನದ ಸಂಶೋಧನೆಗಳು, ಪಾರಂಪರಿಕ ಕ್ಷೇತ್ರಗಳ ಚಿತ್ರಗಳನ್ನು ಬಿಡಿಸಿ ಸಂಭ್ರಮಿಸಿದರು.
ಸ್ಪರ್ಧೆಯಲ್ಲಿ 325 ವಿದ್ಯಾರ್ಥಿಗಳು ಭಾಗವಹಿಸಿದ್ದರು. 1ರಿಂದ 4ನೇ ತರಗತಿಯ 110, 5ರಿಂದ 7ನೇ ತರಗತಿಯ 111, 8ರಿಂದ 10ನೇ ತರಗತಿಯ 104 ವಿದ್ಯಾರ್ಥಿಗಳಿದ್ದರು.
1ರಿಂದ 4ನೇ ತರಗತಿ ವಿದ್ಯಾರ್ಥಿಗಳು ಪರಿಸರ, ಪ್ರಾಣಿ-ಪಕ್ಷಿಗಳು, ಮೈಸೂರು ದಸರಾ ಕುರಿತು ಚಿತ್ರಗಳನ್ನು ಬಿಡಿಸಿದರು. 5ರಿಂದ 7ನೇ ತರಗತಿ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಮೈಲಿಗಲ್ಲು ವಿಷಯಕ್ಕೆ ಸಂಬಂಧಿಸಿದ ಚಿತ್ರ ಬಿಡಿಸಿದರು. ಈ ಪೈಕಿ ಚಂದ್ರಯಾನ-3 ಯೋಜನೆ ಕುರಿತು ಹೆಚ್ಚು ಚಿತ್ರಗಳಿದ್ದವು.
8ರಿಂದ 10ನೇ ತರಗತಿ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ವಿಶ್ವ ಪಾರಂಪರಿಕ ತಾಣಗಳ ಕುರಿತು ಚಿತ್ರ ಬಿಡಿಸಿ ಗಮನ ಸೆಳೆದರು. ವಿಜೇತರಿಗೆ ಅ.22ರಂದು ಬಹುಮಾನ ವಿತರಿಸಲಾಗುತ್ತದೆ.
ಕಾರ್ಯಕ್ರಮವನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್‌ಗೌಡ, ಎಂಎಲ್‌ಸಿ ಎಚ್.ವಿಶ್ವನಾಥ್, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿಯ ವಿಶೇಷಾಧಿಕಾರಿ ಎ.ದೇವರಾಜು, ಕಾರ್ಯಾಧ್ಯಕ್ಷೆ ನಜಿಯಾ ಸುಲ್ತಾನ, ಕಾರ್ಯದರ್ಶಿ ರಶ್ಮಿ, ಅಧಿಕಾರೇತರ ಉಪ ಸಮಿತಿ ಅಧ್ಯಕ್ಷೆ ಹೇಮಲತಾ, ಉಪಾಧ್ಯಕ್ಷ ಜಯಚಂದ್ರ ಇನ್ನಿತರರಿದ್ದರು.