

ಕೋಲಾರ: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಾನಪದದ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ರಾಜ್ಯದ ವಿವಿಧ ಜಿಲ್ಲೆಗಳ ಕಲೆ, ಸಂಸ್ಕೃತಿಯನ್ನು ಬಿಂಬಿಸಿತು.
ಉಡುಪಿ ಜಿಲ್ಲೆಯ ಕಾರ್ಕಳದ ಜೆಸಿಸಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಕರಾವಳಿಯ ಗಂಡುಕಲೆ ಯಕ್ಷಗಾನದ ರೂಪದಲ್ಲಿ ‘ಜಲಕ್ರೀಡೆ’ ನೃತ್ಯ ರೂಪಕ ನೆರೆದಿದ್ದವರ ಮೈ ಮನ ರೋಮಾಂಚನಗೊಳಿಸಿತು. ಯಕ್ಷ ನೃತ್ಯವೀಕ್ಷಿಸಿದರೊಬ್ಬರು ವೈಯಕ್ತಿಕವಾಗಿ 500 ರೂ. ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ದೃಶ್ಯಕಲೆಗೂ ಜನಪದವೇ ಸೈ: ದೃಶ್ಯಕಲೆ ಸ್ಪರ್ಧೆಗಳಲ್ಲಿ ಬಾಗಲಕೋಟೆ ಜಮಖಂಡಿಯ ವಿದ್ಯಾರ್ಥಿಗಳಾದ ಪ್ರಾಚಿ ಸೋನಾಮಾಲ್ಕರ್, ಪ್ರೀತಿ ಕುಂಬಾರ, ಭಾಗ್ಯಶ್ರೀ ಕಲ್ಲೂರ, ಪ್ರಿಯಾಂಕ ಬಡಿಗಾರ ಯಕ್ಷಗಾನ ಕಲೆಯನ್ನು ಜೇಡಿಮಣ್ಣಿನಿಂದ, ಡ್ರಾಯಿಂಗ್‌ನಿಂದ, ಕೈಕಸುಬಿನ ಕಲೆಯಿಂದ ಅನಾವರಣಗೊಳಿಸಿದರೆ, ಬೆಂಗಳೂರಿನ ಜಯನಗರದ ಎನ್‌ಎಸ್‌ವಿಕೆ ಹೈಸ್ಕೂಲ್ ವಿದ್ಯಾರ್ಥಿಗಳು ರೇಖಾಚಿತ್ರ ಜೋಗಪ್ಪ ಮತ್ತು ಜೋಗತಿಯರು ಗೊಂಬೆ ರೂಪದಲ್ಲಿ ಉತ್ತರ ಕರ್ನಾಟಕದ ಸುಪ್ರಸಿದ್ಧ ಜನಪದ ಕಲೆಯಾದ ಚೌಡಕಿ ಮೇಳವನ್ನು ಪ್ರಸ್ತುತ ಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳು ಸ್ಥಳೀಯ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ನಾಗಮಂಡಲದ ಏಳು ಹೆಡೆಯ ಸರ್ಪದ ಆಕೃತಿಯನ್ನು ಸುರುಳಿಯಾಗಿ ಪವಿತ್ರಗಂಟುಗಳೊಂದಿಗೆ ಬರೆದು ಪ್ರದರ್ಶಿಸಿದರು. ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆಯ ಹೆಗ್ಗನಹಳ್ಳಿ ಕಿರಣ್ ಪ್ರೌಢಶಾಲೆ ವಿದ್ಯಾರ್ಥಿಗಳು ಕಿನ್ನಾಳ ಕಲೆ ಪ್ರದರ್ಶಿಸಿದರೆ, ಬಳ್ಳಾರಿಯ ಸಂಡೂರು ತಾಲೂಕು ತಾಳೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಬಯಲಾಟದ ಪರಿಕರ, ವರ್ಲಿ ಕಲೆಯ ಮನೆಗಳನ್ನು ಪ್ರದರ್ಶಿಸಿದರು.
ಬೆಳಗಾವಿಯ ಚಿಣ್ಣರ ಡೊಳ್ಳು ಕುಣಿತ, ಮಂಡ್ಯದ ಮಕ್ಕಳ ಜಾನಪದ ನೃತ್ಯದಲ್ಲಿ ಡೊಳ್ಳು, ಪೂಜಾ ನೃತ್ಯವೂ ಮಿಳಿತಗೊಂಡಿದ್ದರೆ, ಕೊಪ್ಪಳದ ಚಿಣ್ಣರು ಹಾಲಕ್ಕಿ ಸಮುದಾಯದ ಕಲೆ ನೆರೆದಿದ್ದವರಿಗೆ ಹೊಸದೆನಿಸಿತು. ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಹಂಪಿನಗರದ ಭಾರತಿ ವಿದ್ಯಾಲಯದ ವಿದ್ಯಾರ್ಥಿನಿಯರು ಸಂಗೀತ ಸ್ಪರ್ಧೆಯಲ್ಲಿ ಪಾರಂಪರಿಕ ಜಾನಪದ ಸಂಗೀತ ಹಾಡಿದರು.
ನಾಟಕ ಪ್ರದರ್ಶನ: ರಂಗಮಂದಿರದಲ್ಲಿ ನಡೆದ ನಾಟಕ ಸ್ಪರ್ಧೆಗಳಲ್ಲಿ ವಿವಿಧ ಜಿಲ್ಲೆಗಳ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ, ಜಾನಪದ ಸಾಹಿತ್ಯ, ನೈತಿಕ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸುವ ನಾಟಕಗಳನ್ನು ಪ್ರದರ್ಶಿಸಿದರು. ವೀರಸಿಂಧೂರ ಲಕ್ಷ್ಮಣ ನಾಟಕದಲ್ಲಿ ಸ್ವಾತಂತ್ರ್ಯಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ ಸಂಧೂರ ಲಕ್ಷ್ಮಣನ ಜೀವನ ಚರಿತ್ರೆ ಪ್ರದರ್ಶಿಸಿ ಗಮನ ಸೆಳೆದರು.
ಹಿಂದಿ, ಕನ್ನಡ, ಇಂಗ್ಲೀಷ್ ಭಾಷಣ ಸ್ಪರ್ಧೆಗಳಲ್ಲಿ ವಿವಿಧ ಜಿಲ್ಲೆಗಳ ಮಕ್ಕಳು ಮಾತನಾಡಿ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ.
ಡಿಡಿಪಿಐ ಕೆ.ರತ್ನಯ್ಯ, ಡಯಟ್ ಪ್ರಾಂಶುಪಾಲ ಜಯರಾಮರೆಡ್ಡಿ, ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಸಿ.ಆರ್.ಅಶೋಕ್, ಡಿವೈಪಿಸಿ ಮೋಹನ್ ಬಾಬು, ಬಿಇಒಗಳಾದ ಕೆ.ಎಸ್.ನಾಗರಾಜಗೌಡ, ಮಾಧವರೆಡ್ಡಿ, ಕೆಂಪಯ್ಯ, ಉಮಾದೇವಿ, ವಿಷಯ ಪರಿವೀಕ್ಷಕರಾದ ಶಶಿವಧನ, ಗಾಯತ್ರಿ, ಕೃಷ್ಣಪ್ಪ ಮತ್ತಿತರ ಇಲಾಖೆಯ ಎಲ್ಲ ಅಧಿಕಾರಿಗಳು ಹಾಜರಿದ್ದರು.
ಕಿಟ್ ಸಿಗದೆ ಮಕ್ಕಳಿಗೆ ನಿರಾಸೆ: ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಬುಧವಾರವೇ ಬ್ಯಾಗ್ ಸಹಿತ ಕಿಟ್ ನೀಡಬೇಕಿತ್ತು. ನೋಡಲ್ ಅಧಿಕಾರಿಗಳ ವೈಫಲ್ಯದಿಂದ ಕೆಲ ಮಕ್ಕಳಿಗೆ ಗುರುವಾರ ಸ್ಪರ್ಧೆ ಮುಗಿಸಿ ಸಂಜೆ ಊರಿಗೆ ಹೊರಡುವಾಗಲೂ ಕಿಟ್ ಸಿಗಲಿಲ್ಲ. ಡಿಡಿಪಿಐ ಕಚೇರಿಗೆ ಶಿಕ್ಷಕರನ್ನು ಕರೆಯಿಸಿಕೊಂಡು ತರಿಸಿಕೊಡುವುದಾಗಿ ಹೇಳಿದ್ದರಾದರೂ ತಡವಾದ್ದರಿಂದ ಮಕ್ಕಳು ಕಿಟ್ ಇಲ್ಲದೆ ನಿರಾಸೆಗೊಂಡು ಊರ ಕಡೆ ಮುಖಮಾಡಿದರು.