

ಕಲಬುರಗಿ: ನಗರದಲ್ಲಿ ಕಳೆದ ಮೂರು ದಿನದಿಂದ ನಡೆದ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟಕ್ಕೆ ಶನಿವಾರ ತೆರೆ ಬಿದ್ದಿದ್ದು, ಕೆನರಾ ವೃತ್ತದ ತಂಡ ಸಮಗ್ರ ಪ್ರಶಸ್ತಿ ಪಡೆದರೆ, ಧಾರವಾಡ ವೃತ್ತ ದ್ವಿತೀಯ ಸ್ಥಾನ ಪಡೆಯಿತು.
ಕೆನರಾ ವೃತ್ತ ತಂಡವೂ ಮೊದಲ ದಿನದಿಂದಲೇ ಗೆಲುವಿನ ನಾಗಾಲೋಟ ಮುಂದುವರಿಸಿದ್ದು, 142 ಪದಕ, 529 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಧಾರವಾಡ ವೃತ್ತವು 88 ಪದಕ, 342 ಅಂಕದೊಂದಿಗೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಆತಿಥೇಯ ಕಲಬುರಗಿ 25 ಪದಕದೊಂದಿಗೆ ಎಂಟನೇ ಸ್ಥಾನ ಪಡೆದಿದೆ. 39 ಬಂಗಾರ ಪದಕ ಸೇರಿ ಒಟ್ಟು 58 ಪದಕ ಪಡೆದ ಮಂಗಳೂರು ವೃತ್ತದ ತಂಡವೂ ಅತ್ಯುತ್ತಮ ಪ್ರದರ್ಶನದೊಂದಿಗೆ ಮೂರನೇ ಸ್ಥಾನ ಪಡೆಯಿತು.
ಸಮಾರೋಪ ಸಮಾರಂಭದ ನಂತರ ಪ್ರಶಸ್ತಿ ವಿಜೇತ, ಪ್ರಥಮ ಸ್ಥಾನ ಪಡೆದ ಕೆನರಾ ವೃತ್ತದ ಆಟಗಾರರು ಸಹಪಾಠಿಗಳೊಂದಿಗೆ ಕುಣಿದು ಸಂಭ್ರಮಿಸಿದರು. ಎರಡನೇ ಸ್ಥಾನ ಪಡೆದ ಧಾರವಾಡ ವೃತ್ತದ ಆಟಗಾರರು ನೃತ್ಯಕ್ಕೆ ಹೆಜ್ಜೆ ಹಾಕಿದರು.