ನಂದಿ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ, ಸುಗಮ ನಿರ್ವಹಣೆಗೆ ಸಿದ್ಧತೆಯಲ್ಲಿ ಜಿಲ್ಲಾಡಳಿತ

14.jpg
Published on

ಚಿಕ್ಕಬಳ್ಳಾಪುರ: ಕರ್ನಾಟಕದ ಊಟಿ ಎಂತಲೇ ಹೆಸರು ಪಡೆದಿರುವ ಪ್ರವಾಸಿತಾಣ ನಂದಿ ಗಿರಿಧಾಮದಲ್ಲಿ ಜೂ.19 ರಂದು ರಾಜ್ಯ ಸಚಿವ ಸಂಪುಟ ಸಭೆ ಕೈಗೊಳ್ಳಲು ತೀರ್ಮಾನಿಸಿದ್ದು ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಸುಗಮ ನಿರ್ವಹಣೆಗೆ ಪೂರ್ವ ಸಿದ್ಧತೆಯಲ್ಲಿ ತೊಡಗಿದೆ.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ವಾಸ್ತವ್ಯ, ಆಸನ, ಭದ್ರತೆ ಸೇರಿದಂತೆ ವಿವಿಧ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಯಿತು.
ಜೂ.19 ರಂದು ಮಧ್ಯಾಹ್ನ 12 ಕ್ಕೆ ನಂದಿ ಗಿರಿಧಾಮದ ಮಯೂರ ಸಭಾಂಗಣದಲ್ಲಿ ರಾಜ್ಯ ಸಚಿವ ಸಂಪುಟದ 13ನೇ ಸಭೆಯನ್ನು ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಸಚಿವರುಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್ ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

*19 ಸಮಿತಿಗಳ ರಚನೆ
ಸಚಿವ ಸಂಪುಟ ಸುಗಮ ನಿರ್ವಹಣೆಯ ದೃಷ್ಟಿಯಿಂದ ಶಿಷ್ಟಾಚಾರ ಪಾಲಿಸಲು 19 ಸಮಿತಿಗಳನ್ನು ರಚಿಸಲಾಗಿದೆ.
ಭದ್ರತೆ, ವಸತಿ, ಮೂಲ ಸೌಕರ್ಯ, ಭೋಜನ ವ್ಯವಸ್ಥೆ ಸೇರಿದಂತೆ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಲು ಸಮಿತಿಗಳಿಗೆ ಸೂಚಿಸಲಾಯಿತು. ಸಚಿವ ಸಂಪುಟ ಸಭೆ ನಡೆಯುವ ದಿನ ಸಮೀಪಿಸುತ್ತಿದೆ. ಈ ಅವಧಿಯಲ್ಲಿ ವಹಿಸಿಕೊಂಡಿರುವ ಕೆಲಸವನ್ನು ಯಾವುದೇ ಲೋಪಗಳಿಗೆ ಅವಕಾಶ ನೀಡದೇ ನಿರ್ವಹಿಸಬೇಕು ಎಂದು ಡಿಸಿ ಸೂಚಿಸಿದ್ದಾರೆ.

*ಕೇಂದ್ರ ಸ್ಥಾನದಲ್ಲಿರಲು ಆದೇಶ
ಜಿಲ್ಲಾ ಹಾಗೂ ತಾಲೂಕು ಮಟ್ಟದ ಆಡಳಿತಾಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಕೆಲಸ ನಿರ್ವಹಣೆಯ ಕೇಂದ್ರ ಸ್ಥಾನದಲ್ಲಿಯೇ ಇರಲು ಜಿಲ್ಲಾಡಳಿತವು ಸೂಚಿಸಿದೆ.
ಜವಾಬ್ದಾರಿಯುತ ಕೆಲಸಗಳ ನಡುವೆ ಕೇಂದ್ರ ಸ್ಥಾನವನ್ನು ಬಿಟ್ಟು ಹೊರ ಹೋಗುವಂತಿಲ್ಲ. ಆದೇಶದಂತೆ ವಾಸ್ತವ್ಯವಿರುವ ಬಗ್ಗೆ ಮನೆ ವಿಳಾಸ, ಜಿ.ಪಿ.ಆರ್.ಎಸ್ ಸಹಿತ ಛಾಯಾಚಿತ್ರವನ್ನು ಕಳುಹಿಸುತ್ತಿರಬೇಕು ಎಂದು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net