ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಿಸಿ

Raichur Alcohol ban movement Protest
ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಮದ್ಯ ನಿಷೇಧ ಆಂದೋಲನದಿಂದ ಗುರುವಾರ ಧರಣಿ ನಡೆಸಲಾಯಿತು.
Published on

ರಾಯಚೂರು: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದ್ದರೂ ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಮದ್ಯ ನಿಷೇಧ ಆಂದೋಲನದಿಂದ ಗುರುವಾರ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಲಾಯಿತು.

ಜಿಲ್ಲಾ ಕ್ರೀಡಾಂಗಣದಿಂದ ಮೆರವಣಿಗೆ ಮೂಲಕ ಟಿಪ್ಪು ಸುಲ್ತಾನ್ ಉದ್ಯಾನಕ್ಕೆ ಆಗಮಿಸಿದ ಮಹಿಳೆಯರು, ರಾಜ್ಯದಲ್ಲಿ ಸಂಪೂರ್ಣ ಮದ್ಯ ಮಾರಾಟ ನಿಷೇಧಕ್ಕೆ ಸಂಬಂಧಿಸಿ ಸಂಘಟನೆ ನಿಯೋಗದ ಜತೆಗೆ ಮುಖ್ಯಮಂತ್ರಿ ಮಾತುಕತೆಗೆ ಮುಂದಾಗಬೇಕು. ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ಪ್ರತಿ ಹಳ್ಳಿಯಲ್ಲಿ ಐವರು ಮಹಿಳೆಯರನ್ನು ಒಳಗೊಂಡ ಕಾವಲು ಸಮಿತಿ ರಚಿಸಬೇಕು. ಆ ಸಮಿತಿಗೆ ಅರೆ ನ್ಯಾಯಾಂಗ ಅಧಿಕಾರಿ ನೀಡಬೇಕು. ಮಹಾರಾಷ್ಟ್ರದಲ್ಲಿ ಪಾನ ನಿಷೇಧ ಕಾಯ್ದೆಯಲ್ಲಿರುವಂತೆ ರಾಜ್ಯದಲ್ಲಿ ಕನಿಷ್ಠ ಶೇ.10ರಷ್ಟು ಜನರು ಆಯಾ ಹಳ್ಳಿಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡಲು ನಿರಾಕರಿಸಿದರೆ ಪರವನಾಗಿ ಕೊಡಬಾರದು ಎಂದು ಮಹಿಳೆಯರು ಒತ್ತಾಯಿಸಿದರು.

ಧರಣಿಯಲ್ಲಿ ಸಂಘಟನೆ ಸಂಚಾಲಕಿ ಸ್ವರ್ಣ ಭಟ್, ಪದಾಧಿಕಾರಿಗಳಾದ ವಿದ್ಯಾ ಪಾಟೀಲ್, ಎಚ್.ಪದ್ಮಾ, ಮೋಕ್ಷಮ್ಮ, ವೀರಮ್ಮ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು ಪಾಲ್ಗೊಂಡಿದ್ದರು.

ಮಾತಿನ ಚಕಮಕಿ
ಧರಣಿಗೆ ಮುಂಚೆ ಜಿಲ್ಲಾ ಕ್ರೀಡಾಂಗಣದ ಮುಂದಿರುವ ಗಾಂಧೀಜಿ ಪುತ್ಥಳಿ ಮುಂದೆ ಮಹಿಳೆಯರು ಜಮಾಯಿಸಿದಾಗ ಪೊಲೀಸರು, ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿ, ಈ ಸ್ಥಳದಲ್ಲಿ ಜಮಾವಣೆಗೊಳ್ಳಬೇಡಿ’ ಎಂದು ಹೇಳಿದಾಗ ಹೋರಾಟಗಾರರು ಹಾಗೂ ಡಿವೈಎಸ್ಪಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಅಲ್ಲಿಂದ ಮೆರವಣಿಗೆ ತೆರಳಲು ಅವಕಾಶ ನೀಡಿದ ನಂತರ ಪರಿಸ್ಥಿತಿ ತಿಳಿಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net