

ಹುಲಿಯೂರುದುರ್ಗ : ಕುಣಿಗಲ್ ತಾಲೂಕು ಸೇರಿ ಹುಲಿಯೂರುದುರ್ಗ ಮಾರ್ಗಮಧ್ಯೆ ಹಾದು ಹೋಗಿರುವ ರಾಜ್ಯ ಹೆದ್ದಾರಿ 33ಕ್ಕೆ ಭೂಮಿ ಕೊಟ್ಟು ಐದಾರು ವರ್ಷ ಕಳೆದರೂ ರೈತರಿಗೆ ವಿವಿಧ ಕಾರಣಗಳಿಂದಾಗಿ ಪರಿಹಾರ ಸಿಕ್ಕಿಲ್ಲ. ಪರಿಹಾರಕ್ಕಾಗಿ ರೈತರು ಕೋರ್ಟ್, ಕಚೇರಿ ಅಲೆಯುತ್ತಿದ್ದರೆ, ಇತ್ತ ರಾಜ್ಯ ಹೆದ್ದಾರಿ ಪ್ರಾಧಿಕಾರ 60 ಕಿ.ಮೀ.ಗೆ ಒಂದರಂತೆ ಟೋಲ್ ನಿರ್ಮಿಸಿ ವಸೂಲಿಗೆ ನಿಂತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರ ಕೆಆರ್‌ಡಿಸಿಎಲ್ ಸಂಸ್ಥೆಗೆ ಗುತ್ತಿಗೆ ನೀಡಿದ್ದು, ಟೋಲ್ ಸಂಗ್ರಹಕ್ಕೆ ಮುಂದಾಗಿದೆ. ಆದರೆ, ಕುಣಿಗಲ್ ಹಾಗೂ ಮಳವಳ್ಳಿ ಜಂಕ್ಷನ್ ಕಾಮಗಾರಿ ಪೂರ್ಣಗೊಂಡಿಲ್ಲ. ರಾಜ್ಯ ಹೆದ್ದಾರಿ 33ಕ್ಕೆ ಸಂಪರ್ಕಿಸುವ ಹಳ್ಳಿಗಳ ರಸ್ತೆಗಳನ್ನು ಕನಿಷ್ಠ 250 ಮೀಟರ್ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಿ ರಸ್ತೆಗೆ ಹಂಪ್ ಅಳವಡಿಸಬೇಕು. ರಸ್ತೆಗೆ ಹೊಂದಿಕೊಂಡಿರುವ ಗ್ರಾಮಗಳಿಗೆ ರಸ್ತೆ ವಿಭಜಕ ಹಾಗೂ ಅಪಘಾತ ವಲಯ ಗುರುತಿಸಿ ನಾಮಫಲಕ ಕೂಡ ಅಳವಡಿಸ್ಲಿ. ಸಾಕಷ್ಟು ನ್ಯೂನತೆಗಳಿದ್ದರೂ ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಜನ ಸಾಮಾನ್ಯರಿಂದ ಸುಂಕ ವಸೂಲಿಗೆ ಅನುಮತಿ ನೀಡಿದೆ. ನಿತ್ಯ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವ ಸ್ಥಳೀಯ ರೈತರು ಹಾಗೂ ವಾಹನ ಚಾಲಕರಿಗೆ ಇದು ಹೊರೆಯಾಗಲಿದೆ.
ವಿರೋಧದ ನಡುವೆ ಟೋಲ್ ಆರಂಭ: ರೈತರ ವಿರೋಧದ ನಡುವೆಯೂ ದೊಡ್ಡಮಾವತ್ತೂರು ಬಳಿ ಸುಂಕ ವಸೂಲಾತಿ ಗುರುವಾರದಿಂದ ಆರಂಭವಾಗಿದೆ.ಟೋಲ್ ಆರಂಭಿಸಿದ್ದಕ್ಕೆ ರೈತ ಮುಖಂಡರು ಧಿಕ್ಕಾರ ಕೂಗಿದರು. ಈ ವೇಳೆ ಪೊಲೀಸರು ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಹುಲಿಕಟ್ಟೆ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪರಿಸ್ಥಿತಿ ಹತೋಟಿಗೆ ತಂದ ಪೊಲೀಸರು ಟೋಲ್ ಸಿಬ್ಬಂದಿಗೆ ಕೆಲಸ ನಿರ್ವಹಿಸಲು ಅನುವು ಮಾಡಿಕೊಟ್ಟರು. ಅಪಘಾತ ವಲಯದಲ್ಲಿ ಸೂಚನಾ ಲಕ ಅಳವಡಿಸದೆ, ರಸ್ತೆ ನಿರ್ಮಾಣ ಅಪೂರ್ಣಗೊಂಡಿದ್ದರೂ ಸುಂಕ ವಸೂಲಿ ಮಾಡಲಾಗುತ್ತಿದೆ. ಆದ್ದರಿಂದ ಸ್ಥಳ ಪರಿಶೀಲನೆ ನಡೆಸಿ ಕೆಶಿಪ್ ಹಾಗೂ ಕೆಆರ್‌ಸಿಡಿಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿ ನ್ಯೂನತೆ ಸರಿಪಡಿಸಬೇಕು ಎಂದು ಹುಲಿಯೂರುದುರ್ಗ ಉಪತಹಸೀಲ್ದಾರ್ ರವೀಂದ್ರಗೆ ರೈತ ಮುಖಂಡರು ಮನವಿ ಸಲ್ಲಿಸಿದರು.
ಹೀಗಿದೆ ಸುಂಕ... : ಕುಣಿಗಲ್-ಕೊರಟಗೆರೆಗೆ ಬಸ್ ಹಾಗೂ ವಾಣಿಜ್ಯ ವಾಹನಗಳಿಗೆ 150 ರೂಪಾಯಿ, ಕಾರಿಗೆ 45 ರೂ., ಲಗು ವಾಣಿಜ್ಯ ವಾಹನ, ಮಿನಿ ಬಸ್ ಹಾಗೂ ಸರಕು ಸಾಗಣೆ ವಾಹನಗಳಿಗೆ 70 ರೂ., ಭಾರಿ ಗಾತ್ರದ ವಾಹನಗಳಿಗೆ 285 ರೂ. ಹಾಗೂ ಮಳವಳ್ಳಿಯಿಂದ ಕುಣಿಗಲ್‌ಗೆ ಕಾರು ಹಾಗೂ ಜೀಪ್‌ಗಳಿಗೆ 50 ರೂ., ಲು ವಾಣಿಜ್ಯ ವಾಹನ, ಮಿನಿ ಬಸ್‌ಗಳಿಗೆ-75 ರೂ., ಬಸ್ ಹಾಗೂ ವಾಣಿಜ್ಯ ವಾಹನಗಳಿಗೆ 160 ರೂ., ಭಾರಿ ಗಾತ್ರದ ವಾಹನಗಳಿಗೆ 310 ರೂ. ಸುಂಕ ವಿಧಿಸಲಾಗುತ್ತಿದೆ.
ಸ್ಥಳೀಯ ರೈತರು ಹಣ್ಣು, ತರಕಾರಿ ಕೊಂಡೊಯ್ಯಲು ಹಾಗೂ ರೈತರ ವಾಹನಗಳಿಗೆ ಸುಂಕ ಕಟ್ಟುವ ಅವಶ್ಯಕತೆ ಇಲ್ಲ. ಸ್ಥಳೀಯರು ವಾಣಿಜ್ಯ ಬಳಕೆ ವಾಹನಗಳಿಗೆ 205 ರೂಪಾಯಿ ಮಾಸಿಕ ಪಾಸ್ ಪಡೆದು ಓಡಾಡಿಕೊಳ್ಳಬಹುದು. ಜಿ.ಆರ್.ಸಂಗಮೇಶ್ ಇಇ ಕೆಆರ್‌ಡಿಸಿಎಲ್ ಮೈಸೂರು ರಾಜ್ಯ ಸರ್ಕಾರಕ್ಕೆ ರಸ್ತೆ ಹಾಗೂ ವಾಹನ ಸುಂಕ ಕಟ್ಟಿದ್ದು, ಮತ್ತೆ ಪ್ರತಿದಿನ ಟ್ಯಾಕ್ಸ್ ಕಟ್ಟಲು ಸಾಧ್ಯವಿಲ್ಲ. ಸುಂಕ ವಸೂಲಿ ಬದಲು ಗುಣಮಟ್ಟದ ರಸ್ತೆ ನಿರ್ಮಿಸಲಿ, ರೈತರು, ಸಾರ್ವಜನಿಕರಿಂದ ಭಿಕ್ಷೆ ಬೇಡಲು ಸರ್ಕಾರ ಹೊರಟಿದ್ದು, ರೈತರಿಗೆ ಸಮಸ್ಯೆ ಎದುರಾದರೆ ಹೋರಾಟ ಮಾಡಬೇಕಾಗುತ್ತದೆ. ಆನಂದ್ ಪಟೇಲ್ ಹುಲಿಕಟ್ಟೆ ರೈತಸಂ ಜಿಲ್ಲಾಧ್ಯಕ್ಷ ರಸ್ತೆಗೆ ಭೂಮಿ ನೀಡಿದ ರೈತರಿಗೆ ಸೀನಿಯಾರಿಟಿ ಪ್ರಕಾರ ಪರಿಹಾರ ವಿತರಿಸಲಾಗಿದ್ದು, ಹೆಚ್ಚಿನ ಪರಿಹಾರ ಹಾಗೂ ದಾಖಲೆ ಸರಿ ಇಲ್ಲದ ಕಾರಣದಿಂದಾಗಿ ಕೆಲ ರೈತರಿಗೆ ಪರಿಹಾರ ನೀಡುವುದು ವಿಳಂಬವಾಗಿದೆ. ಬಾಕಿ ಇರುವ ರೈತರಿಗೆ ಕೋರ್ಟ್ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಲಾಗುತ್ತದೆ. ಸುಹಾಸ್ ಕಾರ್ಯಪಾಲಕ ಇಂಜಿನಿಯರ್ ಕೆಶಿಪ್