ರಾಜ್ಯ ಹೆದ್ದಾರಿ ಮೇಲೆ ಚರಂಡಿ ನೀರು

13Ahani1_Web
ಅಥಣಿ ಪಟ್ಟಣದ ಜೇವರ್ಗಿ- ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಕೊಳಚೆ ನೀರು ನಿಂತಿರುವುದು.
Published on

ಅಥಣಿ: ಅಥಣಿ ಪಟ್ಟಣದ ಹೃದಯಭಾಗದ ಅಂಬೇಡ್ಕರ ವೃತ್ತದ ರಸ್ತೆ ಇಲ್ಲಿಯ ವಿಜಯಪುರ- ಜೇವರ್ಗಿ ರಾಜ್ಯ ಹೆದ್ದಾರಿಯ ರಸ್ತೆಯ ಮೇಲೆ ಚರಂಡಿ ನೀರು ನಿಂತುಕೊಂಡು ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುವಂತಿದೆ ಎಂದು ಸಾರ್ವಜನಿಕರು ಮತ್ತು ರಸ್ತೆ ಅಕ್ಕಪಕ್ಕದ ನಿವಾಸಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಪರಿವರ್ತನೆಯಾಗಿದೆ. 800 ಮೀಟರ್ ರಸ್ತೆ ಕಾಮಗಾರಿಗೆ 4 ಕೋಟಿ ರೂ. ಮಂಜೂರಾಗಿದೆ. ರಾಜ್ಯ ಹೆದ್ದಾರಿಯ ರಸ್ತೆ ಅಗಲೀಕರಣ ಕಾಮಗಾರಿ ಈ ತಿಂಗಳಲ್ಲಿ ಮುಕ್ತಾಯವಾಗಬೇಕಿತ್ತು. ಕರೊನಾದಿಂದ ಕಾಮಗಾರಿ ವಿಳಂಬವಾಗಿದೆ. ರಸ್ತೆ ಮಾತ್ರ ಯಾವುದೇ ಕೊಳೆಗೇರಿಗೆ ಕಡಿಮೆಯಿಲ್ಲ ಎನ್ನುವಷ್ಟು ಗಬ್ಬೆದ್ದು ನಾರುತ್ತಿದೆ. ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು. ಲೋಕೋಪಯೋಗಿ ಇಲಾಖೆಯ ನಿರ್ಲಕ್ಷೃವೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರಸ್ತೆ ಅಗಲೀಕರಣ ಕಾಮಗಾರಿ ವಿಳಂಬದಿಂದ ರಸ್ತೆಯ ಮೇಲೆ ನೀರು ನಿಂತು ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ವೃದ್ಧರು, ಮಹಿಳೆಯರು, ಚಿಕ್ಕಮಕ್ಕಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇನ್ನೊಂದು ಬದಿಯಲ್ಲಿ ಬಸ್, ಲಾರಿ ಮತ್ತಿತರ ದೊಡ್ಡ ವಾಹನಗಳೂ ಸಂಚರಿಸುವುದರಿಂದ ಏಕಮುಖ ರಸ್ತೆಯಂತಾಗಿದೆ. ಸಾಕಷ್ಟು ಜನದಟ್ಟಣೆ ಕೂಡ ಇರುತ್ತದೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸ್ಥಳೀಯ ನಿವಾಸಿ ಸಿದ್ಧಾ ರ್ಥ ಸಿಂಗೆ ಒತ್ತಾಯಿಸಿದ್ದಾರೆ.

ರಸ್ತೆ ಅಗಲೀಕರಣ ಕಾಮಗಾರಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದೆ. ಹಳೆಯ ಚರಂಡಿಗಳನ್ನು ಲೋಕೋಪಯೋಗಿ ಇಲಾಖೆಯವರೇ ನಿರ್ಮಿಸಿದ್ದಾರೆ. ರಾಜ್ಯ ಹೆದ್ದಾರಿ ಕಾಮಗಾರಿಯಾಗಿರುವುದರಿಂದ ಅವರೇ ಅದರ ನಿರ್ವಹಣೆ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಎಸ್. ಕವಲಾಪುರ ತಿಳಿಸಿದ್ದಾರೆ.

ಅಂಬೇಡ್ಕರ್ ವೃತ್ತದಿಂದ ಎಪಿಎಂಸಿ ಗೇಟ್‌ವರೆಗೆ ಸುಮಾರು 800 ಮೀಟರ್ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಕೋವಿಡ್ ಕಾರಣದಿಂದ ವಿಳಂಬವಾಗಿದೆ. ಅದರಂತೆ ರಸ್ತೆ ಅಕ್ಕಪಕ್ಕದ ನಿವಾಸಿಗಳು ತಕರಾರು ಮಾಡಿರುವುದರಿಂದ ಕಾಮಗಾರಿಗೆ ಅಡಚಣೆಯಾಗಿದೆ. ಪುರಸಭೆಯವರು ಹಳೇ ಚರಂಡಿಯಲ್ಲಿರುವ ಕಸ ವಿಲೇವಾರಿ ಮಾಡದ ಕಾರಣ ಕೊಳಚೆ ನೀರು ರಸ್ತೆಯ ಮೇಲೆ ಬಂದಿದೆ. ಒಂದು ತಿಂಗಳ ಒಳಗಾಗಿ ರಸ್ತೆ ಕಾಮಗಾರಿ ಮುಗಿಸಲಾಗುವುದು. | ಎ.ಜಿ. ಮುಲ್ಲಾ ಸಹಾಯಕ ಅಭಿಯಂತರ ಲೋಕೋಪಯೋಗಿ ಇಲಾಖೆ ಅಥಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net