

ಮಲೆಬೆನ್ನೂರು: ಭದ್ರಾ ನಾಲೆಗಳಿಗೆ ನೀರು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಕೊನೆಭಾಗದ ರೈತರು ರಾಜ್ಯ ಹೆದ್ದಾರಿ ಬಂದ್ ಮಾಡಿ ಬುಧವಾರ ಪ್ರತಿಭಟನೆ ನಡೆಸಿದರು.
ನೀರಾವರಿ ಇಲಾಖೆ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ ಬಳಿಕ ರಾಜ್ಯ ಹೆದ್ದಾರಿ ರಸ್ತೆಯನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, 100 ದಿನ ನೀರು ಹರಿಸುವ ಆದೇಶ ಹೊರಡಿಸದಿದ್ದರೆ ಬುಧವಾರದಿಂದ (ಸೆ.21) ಚಳವಳಿಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರು ಮಾತನಾಡಿ, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ರೈತರ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ನಮಗೆ ನೂರು ದಿನ ನೀರು ಬೇಕೇ ಬೇಕು ಎಂದು ಒತ್ತಾಯಿಸಿದರು.
ನಾಲೆಗಳಿಗೆ 100 ದಿನ ನೀರು ಹರಿಸುವ ಆದೇಶ ನೀಡಿದ್ದರೂ ನೀರು ನಿಲ್ಲಿಸಿ ಗೇಟ್ ಬಂದ್ ಮಾಡಿದ್ದಾರೆ. ಜಲಾಶಯದಲ್ಲಿ 30.54 ಟಿಎಂಸಿ ಅಡಿ ನೀರು ಇದೆ. ನಾಲೆಗಳಿಗೆ 15 ಟಿಎಂಸಿ ಅಡಿ ನೀರು ಹರಿಸಿದರೆ ಸಾಕು. ಇನ್ನೂ 15 ಟಿಎಂಸಿ ಅಡಿ ನೀರು ಉಳಿಯುತ್ತದೆ ಎಂದರು.
ರೈತರ ಹಿತ ಕಾಯುವುದಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭರವಸೆ ನೀಡಿದ್ದು, ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಶೇ. 75ರಷ್ಟು ಭಾಗ ಅಚ್ಚುಕಟ್ಟು ಪ್ರದೇಶವನ್ನು ಹೊಂದಿರುವ ಜಿಲ್ಲೆಯ ರೈತರಿಗೆ ನೀರು ಕೊಡದಿದ್ದರೆ ಬದುಕು ನಡೆಸುವುದು ಕಷ್ಟ. ನೀರು ಆಫ್ ಆ್ಯಂಡ್ ಆನ್ ಮಾಡಿದರೆ ಕೊನೆ ಭಾಗ ತಲುಪುವ ವೇಳೆಗೆ 10 ದಿನ ಬೇಕು. ಹಾಗಾಗಿ, ನಿರಂತರವಾಗಿ 100 ದಿನ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಮೇಲ್ಭಾಗದದಲ್ಲಿ ಅಕ್ರಮ ಪಂಪ್‌ಸೆಟ್ ಹಾಗೂ ಅಡಕೆ ಲಾಬಿಗೆ ಮಣಿದು ನೀರು ಒದಗಿಸಲಾಗುತ್ತಿದೆ. ಮಂಗಳವಾರ ಬೆಂಗಳೂರಿನಲ್ಲಿ ನಡೆದ ಸಭೆಗೆ ಜಿಲ್ಲೆಯ ಎಲ್ಲ ಶಾಸಕ, ಸಚಿವರು ಭಾಗಿಯಾಗಿದ್ದೆವು. ಅಧಿಕಾರಿಗಳು ನಿರಂತರ ನೀರು ಬಿಟ್ಟರೂ ತೊಂದರೆಯಿಲ್ಲ ಎಂದರೂ ನೀರಾವರಿ ಸಚಿವರು ಯಾವುದನ್ನು ಕಿವಿಗೆ ಹಾಕಿಕೊಳ್ಳದೆ ಇನ್ನು ಎರಡು ದಿನಗಳ ನಂತರ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನಿಸೋಣ ಎಂದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೀರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಹಾಗೆ ರಾಜಕಾರಣ ಮಾಡುವವರು ಯಾರೂ ಉಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕೊನೆ ಭಾಗದ ಮಲೆಬೆನ್ನೂರು, ಕುಂಬಳೂರು, ಕೊಮಾರನಹಳ್ಳಿ, ಕಮಲಾಪುರ, ಹೊಳೆಸಿರಿಗೆರೆ, ಯಲವಟ್ಟಿ, ನಿಟ್ಟೂರು, ಬೇವಿನಹಳ್ಳಿ, ಜಿಗಳಿ ಸೇರಿದಂತೆ ಅನೇಕ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.