ರಾಜ್ಯಕ್ಕೆ ಅನ್ಯಾಯವಾಗಲು ಬಿಡೆವು

Ramesh-Web
Published on

ಬೆಳಗಾವಿ : ನೆರೆಯ ತೆಲಂಗಾಣ, ಗೋವಾ ರಾಜ್ಯಗಳು ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಹೊಸ ವಿವಾದ ಸೃಷ್ಟಿಸಲು ಮುಂದಾಗಿವೆ. ಈ ವಿಚಾರವಾಗಿ ಯಾವುದೇ ಕಾರಣಕ್ಕೂ ರಾಜ್ಯಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಶನಿವಾರ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ನಂತರ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣವು ಈಗಾಗಲೇ ಅಂತಿಮ ತೀರ್ಪು ನೀಡಿದೆ. 2013ರಲ್ಲಿಯೇ ಕರ್ನಾಟಕ, ಮಹಾರಾಷ್ಟ್ರ ಮತ್ತು ಅಖಂಡ ಆಂಧ್ರಪ್ರದೇಶ ರಾಜ್ಯಗಳಿಗೆ ನೀರು ಹಂಚಿಕೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದ ಬಳಿಕ ಐತೀರ್ಪಿನ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ, ನೀರು ಹಂಚಿಕೆ ವಿಷಯದಲ್ಲಿ ಹೊಸದಾಗಿ ನ್ಯಾಯಾಧೀಕರಣ ಸ್ಥಾಪಿಸಬೇಕು ಎಂಬ ತೆಲಂಗಾಣ ಸರ್ಕಾರದ ವಾದ ಸರಿಯಲ್ಲ. ಸೀಮಾಂಧ್ರ ಮತ್ತು ತೆಲಂಗಾಣ ರಾಜ್ಯಗಳ ನಡುವಿನ ನೀರು ಹಂಚಿಕೆ ಸಮಸ್ಯೆಗೆ ಕರ್ನಾಟಕವನ್ನು ಹೊಣೆಯಾಗಿಸಬಾರದು ಎಂದು ಕೇಂದ್ರ ಸಚಿವರನ್ನು ರಮೇಶ ಜಾರಕಿಹೊಳಿ ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

ಗೋವಾ ವಾದ ಸತ್ಯಕ್ಕೆ ದೂರ: ಮಹದಾಯಿ ನದಿ ನೀರು ಹಂಚಿಕೆ ಕುರಿತು ಈಗಾಗಲೇ ನ್ಯಾಯಾಧಿಕರಣವು ಐತೀರ್ಪು ನೀಡಿದ್ದು, ಕೇಂದ್ರ ಸರ್ಕಾರವೂ ಸಹ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿದೆ. ಈ ಸಂದರ್ಭದಲ್ಲಿ ಗೋವಾ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವುದು ಹಾಸ್ಯಾಸ್ಪದ ವಾಗಿದೆ. ಮಹದಾಯಿ ಯೋಜನೆಯ ಅನುಷ್ಠಾನದ ವಿಷಯವು ಈಗಾಗಲೇ ತಾರ್ಕಿಕವಾಗಿ ಅಂತ್ಯವಾಗಿದೆ. ಅರಣ್ಯ ಇಲಾಖೆ ಅನುಮೋದನೆ ಮಾತ್ರ ಬಾಕಿಯಿದೆ ಎಂದು ಅವರು ತಿಳಿಸಿದ್ದಾರೆ. ಮಹದಾಯಿ ನೀರು ಹಂಚಿಕೆಗೆ ಸಂಬಂಧಿಸಿ, ಗೋವಾ ಸಿಎಂ ಬಿಡುಗಡೆ ಮಾಡಿರುವ ಛಾಯಾಚಿತ್ರ, ವಿಡಿಯೋಗಳು ಅವರೇ ಸೃಷ್ಟಿಸಿರುವ ದಾಖಲೆಗಳಷ್ಟೇ. ಮಹದಾಯಿ ಮತ್ತು ಮಲಪ್ರಭಾ ನದಿ ನಡುವೆ ಪ್ರಬಲ ಗೋಡೆ ನಿರ್ಮಿಸಲಾಗಿದೆ. ಮಹದಾಯಿಯ ಹನಿ ನೀರೂ ಮಲಪ್ರಭಾ ನದಿ ಸೇರಿಲ್ಲ. ಇಂತಹ ಸುಳ್ಳು ದಾಖಲೆಗಳನ್ನು ಸುಪ್ರೀಂ ಕೋರ್ಟ್ ನಂಬುವುದಿಲ್ಲ. ಈ ಯೋಜನೆ ಸಂಬಂಧ ಕರ್ನಾಟಕ, ಗೋವಾ ರಾಜ್ಯಗಳ
ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳ ಸಮಿತಿಯೊಂದು ಅಸ್ತಿತ್ವದಲ್ಲಿದ್ದು, ಆ ಸಮಿತಿಯಿಂದ ವಾಸ್ತವ ಮಾಹಿತಿ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಮಹದಾಯಿ ಯೋಜನೆ ಜಾರಿಗೆ ಸಿದ್ಧ: ಅಕ್ರಮವಾಗಿ ಮಹದಾಯಿ ನದಿ ತಿರುಗಿಸಿದ್ದೇವೆ ಎಂಬ ಗೋವಾದ ವಾದ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮಹದಾಯಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದು, ಈ ಯೋಜನೆ ಜಾರಿ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ರಾಜ್ಯ ಬಿಜೆಪಿ ಸರ್ಕಾರ ಜಾರಿ ಮಾಡಿಯೇ ಸಿದ್ಧ. ಸಿಎಂ ಯಡಿಯೂರಪ್ಪ ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದಿದ್ದು, ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ ಎಂದು ರಮೇಶ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net